ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ‘ಕೆಜಿಎಫ್’ ಚಾಚಾ ಎಂದೇ ಜನಪ್ರಿಯರಾಗಿದ್ದ ಹರೀಶ್ ರಾಯ್, ಕ್ಯಾನ್ಸರ್ ವಿರುದ್ಧ ನಡೆಸುತ್ತಿದ್ದ ಸುದೀರ್ಘ ಹೋರಾಟದಲ್ಲಿ ಸೋತು, ಇಹಲೋಕ ತ್ಯಜಿಸಿದ್ದಾರೆ. ‘ಓಂ’, ‘ನಲ್ಲ’, ‘ಕೆಜಿಎಫ್’ ನಂತಹ ಹಿಟ್ ಚಿತ್ರಗಳಲ್ಲಿ ತಮ್ಮ ಖಡಕ್ ಅಭಿನಯದ ಮೂಲಕ ಜನಮನ ಗೆದ್ದಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದು, ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವಾಗಿದೆ.
ಕ್ಯಾನ್ಸರ್ ವಿರುದ್ಧದ ಕೊನೆಯ ಹೋರಾಟ
ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅನಾರೋಗ್ಯದಿಂದಾಗಿ ಅವರ ಹೊಟ್ಟೆ ಉಬ್ಬಿಕೊಂಡು, ದೇಹ ಕೃಶವಾಗಿ ಗುರುತು ಸಿಗದಷ್ಟು ಬದಲಾಗಿದ್ದರು. ತಮ್ಮ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೋರಿದ್ದ ಅವರಿಗೆ ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ನಟ ದರ್ಶನ್ ಅಭಿಮಾನಿ ಬಳಗ ಸೇರಿದಂತೆ ಚಿತ್ರರಂಗದ ಅನೇಕರು ನೆರವಾಗಿದ್ದರು. ಹಲವು ಯೂಟ್ಯೂಬರ್‌ಗಳು ಹಾಗೂ ಸಿನಿಮಾ ಗಣ್ಯರು ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ಆದರೆ, ವೈದ್ಯರ ಸತತ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಿಸದೆ ಹರೀಶ್ ರಾಯ್ ಅವರು ತಮ್ಮ ಜೀವನದ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
ಬಣ್ಣದ ಲೋಕದ ಸ್ಮರಣೀಯ ಪಯಣ
ಕರಾವಳಿ ಮೂಲದ ಹರೀಶ್ ರಾಯ್, 90ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಖಳನಟರಾಗಿ ಛಾಪು ಮೂಡಿಸಿದ್ದರು. ಉಪೇಂದ್ರ ನಿರ್ದೇಶನದ ಐಕಾನಿಕ್ ಸಿನಿಮಾ ‘ಓಂ’ ನಿಂದ ಹಿಡಿದು, ಇತ್ತೀಚಿನ ಬ್ಲಾಕ್‌ಬಸ್ಟರ್ ‘ಕೆಜಿಎಫ್ ಚಾಪ್ಟರ್ 1’ ಮತ್ತು ‘ಕೆಜಿಎಫ್ ಚಾಪ್ಟರ್ 2’ ರಲ್ಲಿ ‘ಖಾಸಿಂ ಚಾಚಾ’ ಪಾತ್ರದವರೆಗೆ ಅವರ ಅಭಿನಯ ಸ್ಮರಣೀಯ. ‘ಸಂಜು ವೆಡ್ಸ್ ಗೀತಾ’, ‘ಜೋಡಿ ಹಕ್ಕಿ’, ‘ಸ್ವಯಂವರ’, ‘ನಲ್ಲ’ ಸೇರಿದಂತೆ ನೂರಾರು ಕನ್ನಡ ಮತ್ತು ಕೆಲವು ತಮಿಳು ಚಿತ್ರಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದರು.
ಬಾಂಬೆಗೆ ಓಡಿಹೋಗಿದ್ದ ಹುಡುಗ, ಭೂಗತ ಲೋಕದ ಪರಿಚಯ
ನಟನೆಯಷ್ಟೇ ನಾಟಕೀಯವಾಗಿತ್ತು ಹರೀಶ್ ರಾಯ್ ಅವರ ನಿಜ ಜೀವನ. ಉಡುಪಿಯ ಪ್ರತಿಷ್ಠಿತ ಸ್ವರ್ಣೋದ್ಯಮಿಗಳ ಕುಟುಂಬದಲ್ಲಿ ಜನಿಸಿದರೂ, ಅವರಿಗೆ ತಾಯಿಯ ಪ್ರೀತಿ ಸಿಗದೆ ಚಿಕ್ಕ ವಯಸ್ಸಿನಲ್ಲೇ ಬೇರೆಯವರ ಮನೆಯಲ್ಲಿ ಬೆಳೆಯಬೇಕಾಯಿತು. ತಂದೆಯ ಕಠಿಣ ಸ್ವಭಾವ ಮತ್ತು ಹೊಡೆತಗಳಿಗೆ ಹೆದರಿ, 10ನೇ ತರಗತಿಯಲ್ಲಿದ್ದಾಗ ಶಾಲೆಯನ್ನು ಬಿಟ್ಟು ಮುಂಬೈಗೆ ಓಡಿಹೋಗಿದ್ದರು. ಅಲ್ಲಿ ಎರಡು ವರ್ಷಗಳ ಕಾಲ ಕಷ್ಟದ ಜೀವನ ನಡೆಸುವಾಗ ಅವರಿಗೆ ಭೂಗತ ಲೋಕದ ಸಂಪರ್ಕವೂ ಆಗಿತ್ತು. 1994ರಲ್ಲಿ ಬೆಂಗಳೂರಿಗೆ ಮರಳಿದ ಅವರು, ಗೆಳೆಯರೊಬ್ಬರ ಮೂಲಕ ನಿರ್ದೇಶಕ ಉಪೇಂದ್ರ ಅವರನ್ನು ಭೇಟಿಯಾಗಿ ‘ಓಂ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು.
ಈಡೇರದ ಕೊನೆಯ ಆಸೆ
ಬೆಂಗಳೂರಿನ ಅಂಜನಾಪುರದಲ್ಲಿ ವಾಸವಿದ್ದ ಹರೀಶ್ ರಾಯ್ ಅವರ ಮೂಲ ಹೆಸರು ಹರೀಶ್ ಆಚಾರ್ಯ. ಅವರ ಪಾರ್ಥಿವ ಶರೀರವನ್ನು ನಿನ್ನೆ ಅಂಜನಾಪುರದ ನಿವಾಸದಲ್ಲಿ ಸಾರ್ವಜನಿಕ ದರ್ಶನ ಮುಗಿಸಿ, ಇಂದು ಹುಟ್ಟೂರಾದ ಉಡುಪಿಯ ಅಂಬಲಪಾಡಿಯಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.
ತಮ್ಮ ಸಾವಿನ ನಂತರ ಅಂಗಾಂಗಗಳನ್ನು ದಾನ ಮಾಡಬೇಕೆಂಬುದು ಹರೀಶ್ ರಾಯ್ ಅವರ ದೊಡ್ಡ ಆಸೆಯಾಗಿತ್ತು. ಈ ಬಗ್ಗೆ ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದರು. ಆದರೆ, ಕ್ಯಾನ್ಸರ್ ದೇಹದ ತುಂಬೆಲ್ಲಾ ಹರಡಿದ್ದರಿಂದ ಅಂಗಾಂಗಗಳನ್ನು ದಾನ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರ ಕೊನೆಯ ಆಸೆ ಈಡೇರಲಿಲ್ಲ. ಹರೀಶ್ ರಾಯ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.








