ರಾಜ್ಯ ಕಾಂಗ್ರೆಸ್ನಲ್ಲಿ ಬಣಜಗಳು, ಒಳಜಗಳ, ನಾಯಕತ್ವ ವಿಚಾರಗಳ ಕುರಿತು ಚರ್ಚೆಗಳು ಜೋರಾಗಿರುವ ನಡುವೆ, ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ನನ್ನ ರಕ್ತದಲ್ಲೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ತಮ್ಮ ಆಪ್ತರು ದೆಹಲಿಗೆ ಹೋಗಿರುವುದು ಬಣ ರಾಜಕೀಯದ ಭಾಗ ಎಂದು ಮೂಡುತ್ತಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ನನ್ನ ಬಳಿ ಯಾವುದೇ ಬಣ ಇಲ್ಲ. ನಾನು ಯಾವುದೇ ಗುಂಪಿನ ನಾಯಕನೂ ಅಲ್ಲ. ನಾನು 140 ಕಾಂಗ್ರೆಸ್ ಶಾಸಕರಿಗೆ ಅಧ್ಯಕ್ಷ. ನನಗೆ 140 ಜನರೂ ಒಂದೇ ರೀತಿ ಮುಖ್ಯ. ಯಾರನ್ನೂ ಬೇರ್ಪಡಿಸುವ, ಗುಂಪು ಮಾಡಲು ಯತ್ನಿಸುವ ಸ್ವಭಾವ ನನಗಿಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪಕ್ಷದೊಳಗಿನ ಬದಲಾವಣೆ, ಸಂಪುಟ ವಿಸ್ತರಣೆ, ನಾಯಕತ್ವ ಚರ್ಚೆಗಳ ನಡುವೆ ಡಿಕೆಶಿ ಬಣವೆಂದು ಹೇಳಲಾಗುವ ಶಾಸಕರು ದೆಹಲಿಗೆ ತೆರಳಿದ್ದರಿಂದ ರಾಜಕೀಯ ವಲಯದಲ್ಲಿ ಹಲವಾರು ಊಹಾಪೋಹಗಳು ಮೊಳೆಕೆಯೊಡೆಯುತ್ತಿದ್ದವು. ಇದರಿಂದ ಡಿಕೆಶಿ ಬಣ–ಸಿದ್ದರಾಮಯ್ಯ ಬಣ ನಡುವೆ ಮತ್ತೆ ಚರ್ಚೆಗಳು ಜೋರಾಗಿದ್ದವು.
ಆದರೆ ಡಿಕೆಶಿ ತಮ್ಮ ಹೇಳಿಕೆಯಿಂದ ಈ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಅವರು ಮತ್ತೊಮ್ಮೆ, ಗುಂಪು ಮಾಡುವುದು ನನ್ನ ಸ್ವಭಾವವೇ ಅಲ್ಲ. ಕಾಂಗ್ರೆಸ್ಗೆ ಏಕತೆ ಮುಖ್ಯ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಒತ್ತಿಹೇಳಿದ್ದಾರೆ.
ಪಕ್ಷದೊಳಗಿನ ಗೊಂದಲಗಳ ಸಮಯದಲ್ಲಿ ಬಂದಿರುವ ಡಿಕೆಶಿಯ ಈ ಹೇಳಿಕೆ, ಕಾಂಗ್ರೆಸ್ನಲ್ಲಿ ಉದ್ವಿಗ್ನತೆ ಕಡಿಮೆ ಮಾಡುವ ದಿಶೆಯಲ್ಲಿ ಮಹತ್ವದ್ದಾಗಿ ಕಾಣುತ್ತಿದೆ.








