ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ತಾರಕಕ್ಕೇರಿರುವ ಸಂದರ್ಭದಲ್ಲಿಯೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ದಾಳ ಉರುಳಿಸಿದ್ದಾರೆ. ಸಿಎಂ ಕುರ್ಚಿ ವಿಚಾರದಲ್ಲಿ ನಡೆಯುತ್ತಿರುವ ಊಹಾಪೋಹಗಳಿಗೆ ಮತ್ತು ಆಂತರಿಕ ಭಿನ್ನಮತಗಳಿಗೆ ಶಾಶ್ವತವಾಗಿ ತೆರೆ ಎಳೆಯಲು ಸಿದ್ದರಾಮಯ್ಯ ಮುಂದಾಗಿದ್ದು, ಹೈಕಮಾಂಡ್ ನಾಯಕರಿಗೆ ನೇರವಾಗಿಯೇ ಕೆಲವು ಕಠಿಣ ಸಂದೇಶಗಳನ್ನು ರವಾನಿಸಿದ್ದಾರೆ.
1. ನಾಯಕತ್ವ ಗೊಂದಲಕ್ಕೆ ಕೂಡಲೇ ತೆರೆ ಎಳೆಯಿರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಪ್ರಮುಖವಾಗಿ ಪ್ರಸ್ತಾಪಿಸಿದ ವಿಷಯವೆಂದರೆ ಅನಗತ್ಯ ಗೊಂದಲಗಳು. ತಮ್ಮ ಕಡೆಯಿಂದ ಆಡಳಿತದಲ್ಲಿ ಯಾವುದೇ ಲೋಪವಾಗಿಲ್ಲದಿದ್ದರೂ, ಕೆಲವು ಶಾಸಕರು ಮತ್ತು ನಾಯಕರು ದೆಹಲಿಗೆ ತೆರಳಿ ಸಿಎಂ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತಿದೆ. ಈ ನಾಯಕತ್ವ ಬದಲಾವಣೆಯ ಚರ್ಚೆಗಳು ಸರ್ಕಾರದ ವರ್ಚಸ್ಸಿಗೆ ಡ್ಯಾಮೇಜ್ ಮಾಡುತ್ತಿವೆ. ಆದ್ದರಿಂದ ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಿ, ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಸಿಎಂ ಖಡಕ್ ಆಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
2. ಸಂಪುಟ ಪುನಾರಚನೆಗೆ ಅವಕಾಶ ನೀಡಿ
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮತ್ತು ಭಿನ್ನಮತೀಯರನ್ನು ನಿಯಂತ್ರಿಸಲು ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಖರ್ಗೆ ಭೇಟಿ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿರುವ ಸಿಎಂ, ಕಳೆಗುಂದಿರುವ ಇಲಾಖೆಗಳನ್ನು ಸರಿಪಡಿಸಲು ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಲು ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವುದು ಅವರ ತಂತ್ರವಾಗಿದೆ.
3. ಐದು ವರ್ಷ ನಾನೇ ಸಿಎಂ, ಮುಂದಿನ ಬಜೆಟ್ ನನ್ನದೇ
ನಾಯಕತ್ವ ಬದಲಾವಣೆಯ ಕೂಗಿಗೆ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ, ಆದರೆ ಜನಾದೇಶದಂತೆ ನಾನು ಪೂರ್ಣಾವಧಿಗೆ ಅಂದರೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಅಷ್ಟೇ ಅಲ್ಲದೆ, ಮುಂದಿನ ರಾಜ್ಯ ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ ಎಂದು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಗುಂಪುಗಾರಿಕೆ ಮಾಡುವ ಉದ್ದೇಶವಿದ್ದರೆ ನಾನು ಎಂದೋ ಮಾಡುತ್ತಿದ್ದೆ, ಆದರೆ ಪಕ್ಷದ ಹಿತದೃಷ್ಟಿಯಿಂದ ಮೌನವಾಗಿದ್ದೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
4. ಖರ್ಗೆ ಅಭಯ ಮತ್ತು ರಾಹುಲ್ ಜೊತೆಗಿನ ಚರ್ಚೆ
ಸಿದ್ದರಾಮಯ್ಯ ಅವರ ಮಾತುಗಳನ್ನು ಆಲಿಸಿದ ಮಲ್ಲಿಕಾರ್ಜುನ ಖರ್ಗೆ, ತಾಳ್ಮೆ ಕಳೆದುಕೊಳ್ಳದಂತೆ ಸಲಹೆ ನೀಡಿದ್ದಾರೆ. ಇದು ಮಾಧ್ಯಮ ಸೃಷ್ಟಿಸಿದ ವಿವಾದವಾಗಿದ್ದು, ಅಧಿಕಾರ ಹಸ್ತಾಂತರದ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಬೇಡ. ಎರಡೂ ಗುಂಪುಗಳು ಸಮನ್ವಯದಿಂದ ವರ್ತಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ನವೆಂಬರ್ 28 ರಂದು ರಾಹುಲ್ ಗಾಂಧಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
5. ಸಾರ್ವಜನಿಕವಾಗಿ ಸಿಎಂ ಹೇಳಿದ್ದೇನು?
ಸಭೆಯ ನಂತರ ಹೊರಬಂದ ಸಿದ್ದರಾಮಯ್ಯ, ಮಾಧ್ಯಮಗಳ ಮುಂದೆ ಜಾಣ್ಮೆಯ ನಡೆ ಪ್ರದರ್ಶಿಸಿದರು. ನಾವು ಕೇವಲ ಪಕ್ಷ ಸಂಘಟನೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು, ಬಿಬಿಎಂಪಿ ಚುನಾವಣೆ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಬಗ್ಗೆ ಚರ್ಚಿಸಿದ್ದೇವೆ. ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳುವ ಮೂಲಕ ಕುತೂಹಲವನ್ನು ಕಾಯ್ದಿರಿಸಿದ್ದಾರೆ.
ಡಿ.ಕೆ. ಸುರೇಶ್ ಮಾರ್ಮಿಕ ಪೋಸ್ಟ್ ಸಂಚಲನ
ಇತ್ತ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಯಾಗುತ್ತಿದ್ದಂತೆಯೇ, ಅತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ವಾಲಿಬಾಲ್ ಆಡುತ್ತಿರುವ ಫೋಟೋ ಹಾಕಿ, ಯಶಸ್ಸು ಒಂದು ಪ್ರಯಾಣ, ಅದೊಂದು ಗಮ್ಯ ಸ್ಥಾನವಲ್ಲ ಎಂದು ಬರೆದುಕೊಂಡಿದ್ದಾರೆ. ಚೆಂಡು ಈಗ ಯಾರ ಅಂಗಳದಲ್ಲಿದೆ ಮತ್ತು ಮುಂದಿನ ಸರ್ವ್ ಯಾರದ್ದು ಎಂಬ ಸೂಚ್ಯ ಸಂದೇಶವನ್ನು ಈ ಪೋಸ್ಟ್ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮತ್ತು ಬೇಡಿಕೆಗಳನ್ನು ಇಡುವ ಮೂಲಕ ಚೆಕ್ ಮೇಟ್ ಇಡಲು ಪ್ರಯತ್ನಿಸಿದ್ದು, ನವೆಂಬರ್ 28 ರ ರಾಹುಲ್ ಗಾಂಧಿ ಭೇಟಿಯ ನಂತರವಷ್ಟೇ ಈ ರಾಜಕೀಯ ಹೈಡ್ರಾಮಾದ ಸ್ಪಷ್ಟ ಚಿತ್ರಣ ಹೊರಬೀಳಲಿದೆ.








