ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಕಳೆದ ಕೆಲವು ದಿನಗಳಿಂದ ಎದ್ದಿದ್ದ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ರಾಜಕೀಯ ಬಿಕ್ಕಟ್ಟು ಇದೀಗ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಬಂದಿಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರೊಂದಿಗೆ ನಡೆಸಿದ ಸರಣಿ ಸಭೆಗಳು ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ಈ ಸಭೆಗಳಲ್ಲಿ ರಾಜ್ಯದ ಹಿರಿಯ ನಾಯಕರು ಹೈಕಮಾಂಡ್ ಮುಂದೆ ತೆರೆದಿಟ್ಟ ಸತ್ಯಗಳು ಮತ್ತು ನೀಡಿದ ಜೆಡಿಎಸ್ ಉದಾಹರಣೆ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಮತ್ತಷ್ಟು ಭದ್ರಪಡಿಸಿದೆ ಎಂದೇ ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಪಕ್ಷಕ್ಕೆ ಆಗುವ ಡ್ಯಾಮೇಜ್ ಎಂಥದ್ದು ಎಂಬುದನ್ನು ವಿವರಿಸಲು ರಾಜ್ಯ ನಾಯಕರು ಜೆಡಿಎಸ್ ಪಕ್ಷದ ಏಳುಬೀಳುಗಳ ಇತಿಹಾಸವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರೊಂದಿಗಿನ ಒನ್ ಟು ಒನ್ ಮಾತುಕತೆಯ ಸಂದರ್ಭದಲ್ಲಿ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಲು ಜೆಡಿಎಸ್ ಪಕ್ಷದ ಇತಿಹಾಸವನ್ನು ಉಲ್ಲೇಖಿಸಲಾಗಿದೆ.
ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಲ್ಲಿದ್ದಾಗ ಆ ಪಕ್ಷದ ವರ್ಚಸ್ಸು ಮತ್ತು ತಾಕತ್ತು ಎಷ್ಟಿತ್ತು ಹಾಗೂ ಅವರು ಪಕ್ಷ ತೊರೆದ ಬಳಿಕ ಜೆಡಿಎಸ್ ಸ್ಥಿತಿ ಏನಾಗಿದೆ ಎಂಬುದನ್ನು ಅಂಕಿಅಂಶಗಳ ಸಮೇತ ರಾಹುಲ್ ಗಾಂಧಿ ಅವರಿಗೆ ವಿವರಿಸಲಾಗಿದೆ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಅಂದು ಜೆಡಿಎಸ್ ಪಕ್ಷ ಬರೋಬ್ಬರಿ 69 ಶಾಸಕರ ಬಲವನ್ನು ಹೊಂದಿತ್ತು. ಕೇವಲ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗದೇ ಉತ್ತರ ಕರ್ನಾಟಕದಲ್ಲೂ ಜೆಡಿಎಸ್ ಪ್ರಾಬಲ್ಯ ಹೊಂದಿತ್ತು. ಇದಕ್ಕೆ ಪ್ರಮುಖ ಕಾರಣ ಸಿದ್ದರಾಮಯ್ಯ ಅವರ ಅಹಿಂದ ನಾಯಕತ್ವವಾಗಿತ್ತು.
ಆದರೆ, ಯಾವಾಗ ಸಿದ್ದರಾಮಯ್ಯ ಜೆಡಿಎಸ್ ತೊರೆದರೋ, ಅಂದಿನಿಂದ ಆ ಪಕ್ಷದ ಅವನತಿ ಆರಂಭವಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಸಾಬೀತುಪಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ಇದರ ಪರಿಣಾಮವಾಗಿ 69 ಶಾಸಕರಿದ್ದ ಪಕ್ಷ ಇಂದು ಕೇವಲ 19 ಸ್ಥಾನಗಳಿಗೆ ಕುಸಿದಿದೆ. ಅಷ್ಟು ಮಾತ್ರವಲ್ಲದೆ, ಪ್ರಸ್ತುತ ಶಾಸಕರ ಸಂಖ್ಯೆ 18ಕ್ಕೆ ಇಳಿದಿದೆ. ಸಿದ್ದರಾಮಯ್ಯ ಎಂಬ ಒಬ್ಬ ನಾಯಕ ಹೊರಬಂದರೆ ಪ್ರಾದೇಶಿಕ ಪಕ್ಷವೊಂದು ಹೇಗೆ ನೆಲಕಚ್ಚಿತು ಎಂಬ ಈ ನೈಜ ಉದಾಹರಣೆಯು ಹೈಕಮಾಂಡ್ ಅನ್ನು ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ.
ಸಿದ್ದರಾಮಯ್ಯ ಕೇವಲ ಒಬ್ಬ ನಾಯಕರಲ್ಲ, ಅವರು ರಾಜ್ಯದ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ (ಅಹಿಂದ) ಪಾಲಿನ ಪ್ರಶ್ನಾತೀತ ನಾಯಕ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ಒಬಿಸಿ ಪರವಾದ ನಿಲುವುಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದೆ. ಬಿಹಾರದಲ್ಲಿ ಜಾತಿ ಗಣತಿಯ ಪ್ರಯೋಗದ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಜಾತಿ ಗಣತಿ ವರದಿ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಇಂತಹ ಮಹತ್ವದ ಸಂದರ್ಭದಲ್ಲಿ ಒಬಿಸಿ ಸಮುದಾಯದ ಪ್ರಬಲ ನಾಯಕನಾಗಿರುವ ಸಿದ್ದರಾಮಯ್ಯ ಅವರನ್ನು ಬದಲಿಸುವುದು ಪಕ್ಷದ ತಳಪಾಯವನ್ನೇ ಅಲುಗಾಡಿಸಿದಂತೆ ಎಂಬ ಎಚ್ಚರಿಕೆಯನ್ನು ನಾಯಕರು ನೀಡಿದ್ದಾರೆ.
ಸಿದ್ದರಾಮಯ್ಯ ಪರ ಹಿರಿಯ ನಾಯಕರ ಬ್ಯಾಟಿಂಗ್
ವಿಶೇಷವಾಗಿ, ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯ ರಾಜಕೀಯದ ವಸ್ತುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹರಿಪ್ರಸಾದ್ ಅವರು ಹೈಕಮಾಂಡ್ ಜೊತೆಗೆ ನೇರ ಸಂಪರ್ಕ ಹೊಂದಿರುವ ನಾಯಕರಾಗಿದ್ದು, ಅವರು ಸಿದ್ದರಾಮಯ್ಯ ಅವರ ನಾಯಕತ್ವದ ಅಗತ್ಯವನ್ನು ಪ್ರತಿಪಾದಿಸಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ರಾಜ್ಯದ ರಾಜಕಾರಣದ ನಾಡಿಮಿಡಿತ ಬಲ್ಲ ಹಲವು ನಾಯಕರು ರಾಹುಲ್ ಗಾಂಧಿಗೆ ಸತ್ಯಸ್ಥಿತಿ ಮನವರಿಕೆ ಮಾಡಿದ್ದಾರೆ.
ರಾಜ್ಯ ನಾಯಕರ ಅಭಿಪ್ರಾಯ, ಜೆಡಿಎಸ್ ಪಕ್ಷದ ಅವನತಿಯ ಪಾಠ ಮತ್ತು ಮುಂಬರುವ ಲೋಕಸಭಾ ಹಾಗೂ ಸ್ಥಳೀಯ ಚುನಾವಣೆಗಳ ದೃಷ್ಟಿಯಿಂದ ಹೈಕಮಾಂಡ್ ನಾಯಕತ್ವ ಬದಲಾವಣೆಯ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಇಲ್ಲ ಎಂದು ದೆಹಲಿ ಮೂಲಗಳು ತಿಳಿಸಿವೆ. ಸದ್ಯಕ್ಕೆ ಸಿದ್ದರಾಮಯ್ಯ ಅವರ ನಾಯಕತ್ವವೇ ಮುಂದುವರಿಯಲಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಂಪುಟ ಪುನಾರಚನೆಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆಯಾಗಿ, ದೆಹಲಿಯಲ್ಲಿ ನಡೆದ ಈ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ಕೈಯನ್ನು ಮತ್ತಷ್ಟು ಬಲಪಡಿಸಿವೆ.








