ರಾಜ್ಯದ ಪ್ರಮುಖ ಕೃಷಿ ಬೆಳೆಗಳಲ್ಲಿ ಒಂದಾದ ಮೆಕ್ಕೆಜೋಳ ಕಳೆದ ಕೆಲ ವರ್ಷಗಳಿಂದ ಉತ್ತಮ ಉತ್ಪಾದನೆ ನೀಡುತ್ತಿದ್ರೂ, ಸರಿಯಾದ ಬೆಲೆ ಸಿಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ, ಸರ್ಕಾರ ಈ ಹಿಂದೆ KMF ಮೂಲಕ ನೇರ ಮೆಕ್ಕೆಜೋಳ ಖರೀದಿಗೆ ಸೂಚನೆ ನೀಡಿದ್ದರೂ, ಅದರಿಂದ ರೈತರಿಗೆ ಹೆಚ್ಚಿನ ಲಾಭ ಆಗುವುದಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಸುಮಾರು 45 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಸರ್ಕಾರವು KMF ಮೂಲಕ ಕೇವಲ 1 ಲಕ್ಷ ಮೆಟ್ರಿಕ್ ಟನ್ ಮಾತ್ರ ಖರೀದಿಸಲು ನಿರ್ಧರಿಸಿದೆ. ಇಷ್ಟು ಕಡಿಮೆ ಪ್ರಮಾಣದ ಖರೀದಿಯಿಂದ ರಾಜ್ಯದ ಲಕ್ಷಾಂತರ ಮೆಕ್ಕೆಜೋಳ ರೈತರಿಗೆ ಯಾವುದೇ ಸಹಾಯ ಆಗುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.
KMF ಏಜೆನ್ಸಿ ಮೂಲಕ ಖರೀದಿ ಮಾಡುವುದಾದರೆ, ಪ್ರತ್ಯೇಕ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರು ತಮ್ಮ ಉತ್ಪನ್ನವನ್ನು ಸುಲಭವಾಗಿ ಮಾರಾಟ ಮಾಡುವ ವ್ಯವಸ್ಥೆ ಒದಗಿಸಬೇಕು. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಸಂಖ್ಯೆ ಕಡಿಮೆಯಾಗಬೇಕು.
ಆದರೆ, ಖರೀದಿ ಕೇಂದ್ರಗಳನ್ನು ತೆರೆದು ಕಾರ್ಯನಿರ್ವಹಿಸುವ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ರೈತರು ಚಿಂತಿತರಾಗಿದ್ದಾರೆ.
ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮೆಕ್ಕೆಜೋಳವೇ ಮುಖ್ಯ ಬೆಳೆ. ಇಲ್ಲಿ ಉತ್ಪಾದನೆ ಜಾಸ್ತಿಯಾಗಿರುವುದರಿಂದ ರೈತರ ಒತ್ತಡವೂ ಹೆಚ್ಚು. ಅವರ ಮುಖ್ಯ ಬೇಡಿಕೆಗಳು ಏನೆಂದರೆ,
ಪ್ರತಿ ತಾಲ್ಲೂಕಿಗೆ ಖರೀದಿ ಕೇಂದ್ರ ತೆರೆಯಬೇಕು
ರೈತರಿಗೆ MSP (ಕನಿಷ್ಠ ಬೆಂಬಲ ದರ) ಖಚಿತಪಡಿಸಬೇಕು
ಖರೀದಿ ಪ್ರಮಾಣವನ್ನು ಕನಿಷ್ಠ 10–15 ಲಕ್ಷ ಮೆಟ್ರಿಕ್ ಟನ್ ವರೆಗೆ ಹೆಚ್ಚಿಸಬೇಕು
ರೈತರ ಪ್ರಸ್ತಾಪಗಳನ್ನು ಪರಿಶೀಲಿಸಲು ಕೃಷಿ ಇಲಾಖೆಯ ಒಳಚರ್ಚೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಖರೀದಿ ಪ್ರಮಾಣ ಹೆಚ್ಚಳ ಅಥವಾ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆ ಇದೆ.








