ರಾಜ್ಯ ರಾಜಕೀಯ ವಲಯದಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ಯಾರು ಎಂಬ ಕುತೂಹಲ ಹೆಚ್ಚುತ್ತಿರುವ ನಡುವೆ, ಆಡಳಿತ ಪಕ್ಷದ ಒಳಗೇ ಭಾರಿ ಪೈಪೋಟಿ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ಆಡಳಿತ ಪಕ್ಷವಾದ ಕಾಂಗ್ರೆಸ್ನೊಳಗೆ 7 ರಿಂದ 8 ಮಂದಿ ಹಿರಿಯ ನಾಯಕರು, ಸಚಿವರು ನಾನು ಸಿಎಂ ಆಗಬೇಕು ಎಂಬ ಪೈಪೋಟಿಯಲ್ಲಿ ತೊಡಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಪೈಪೋಟಿ ಕಾರಣದಿಂದ ಸರ್ಕಾರದ ಆಡಳಿತ ಸಂಪೂರ್ಣವಾಗಿ ಕುಸಿದುಬಿದ್ದಂತಾಗಿದೆ ಎಂದು ಟೀಕೆ ಮಾಡಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ತನ್ನ ಅಂತರಿಕ ಕಲಹದಲ್ಲೇ ಮುಳುಗಿದ್ದು, ಈ ಗೊಂದಲದ ನಡುವೆ ಸಾರ್ವಜನಿಕ ಸಮಸ್ಯೆಗಳು ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಸಿದ್ದರಾಮಯ್ಯ ಸರ್ಕಾರಕ್ಕೆ ರೈತರ ವಿಷಯದಲ್ಲಿ ಗಂಭೀರ ನಿರ್ಲಕ್ಷ್ಯವಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬರದ ಆತಂಕ, ಬೆಳೆಯ ನಾಶ ಇರುವಾಗ ಸರ್ಕಾರ ರೈತರಿಗೆ ನೆರವು ನೀಡದೆ ಕೈಕಟ್ಟಿ ನಿಂತಿದೆ. ಸಿಎಂ ಕುರ್ಚಿಗೆ ನಡೆಯುತ್ತಿರುವ ಪೈಪೋಟಿಯಿಂದ ಆಡಳಿತ ಯಂತ್ರವೇ ದಿಕ್ಕುತೋಚದ ಪರಿಸ್ಥಿತಿಯಲ್ಲಿ ಇದೆ ಎಂದು ವಿಜಯೇಂದ್ರ ಕಿಡಿಕಾರಿದರು.








