ದಯೆ, ಅಹಿಂಸೆ ಮತ್ತು ಶಾಂತಿಯನ್ನು ಸಾರಿದ ಬುದ್ಧನ ಭಕ್ತರಿಂದಲೇ ಬುದ್ದನ ನಾಡಿನಲ್ಲಿ ಆಂತರಿಕ ಕ್ಷೋಭೆ; ಇದು ಮ್ರಾಕ್ ಯೂನ ಅಶಾಂತ ಬುದ್ದನ ಒಡೆದ ಮನಸಿನ ಕಥೆ
6 ಶತಮಾನಗಳಷ್ಟು ಹಿಂದಿನ ಪ್ರಾಚೀನ ಪಟ್ಟಣದಲ್ಲಿ ಚಾರಿತ್ರಿಕ ಮಹತ್ವ ಸಾರುವ ಸಾವಿರಾರು ಶಿಲಾಸ್ಮಾರಕಗಳು. ಬುದ್ದನ ಕುರುಹು ಒಡಲಲ್ಲಿಟ್ಟುಕೊಂಡು ಭಯದ ನೆರಳಲ್ಲಿ ಬದುಕುತ್ತಿರುವ ಪರಂಪರೆಗಳ ನಾಡು. ಶ್ರೇಷ್ಟ ಪ್ರವಾಸಿ ತಾಣವಾಗಬೇಕಿದ್ದ ಪ್ರದೇಶದಲ್ಲಿ ನಿರಂತರ ಸಮಾಜಿಕ ಕ್ಷೋಭೆ. 700ಕ್ಕೂ ಹೆಚ್ಚು ಪ್ರಾಚೀನ ದೇಗುಲಗಳನ್ನು ಹೊಂದಿರುವ ಮಯನ್ಮಾರ್ ದೇಶದ ಶಾಪಗ್ರಸ್ತ ಪ್ರದೇಶ. ಹಾಗಿದ್ದರೇ ಯಾವುದೀ ಪ್ರದೇಶ? ಇದು ಮಯನ್ಮಾರ್ ನ ರೇಕಿನ್ ಪ್ರಾಂತ್ಯದ ಮ್ರಾಕ್ ಯೂ ಎಂಬ ಪುಟ್ಟ ಸಾಂಸ್ಕೃತಿಕ ಪಟ್ಟಣ. ಈ ಪ್ರದೇಶ ಅರಾಕನೀಸ್ ಮಹಾಸಾಮ್ರಾಜ್ಯದ ರಾಜಧಾನಿಯಾಗಿತ್ತು.
17ನೇ ಶತಮಾನದಲ್ಲಿ ಏಷ್ಯಾದ ಪ್ರಮುಖ ವ್ಯಾಪಾರ ವಹಿವಾಟುಗಳ ಪ್ರದೇಶವೂ ಆಗಿತ್ತು. ಈ ಚಾರಿತ್ರಿಕ ತಾಣದಲ್ಲಿ ಒಂದು ಸಮುದಾಯದ ಮಂದಿಯ ರಕ್ತದೋಕುಳಿ ನಡೆಯಿತು. ಐತಿಹಾಸಿಕ ಮಹತ್ವದ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು. ಬುದ್ದನ ಭಕ್ತರನ್ನು ಅಹಂಕಾರ ಆವರಿಸಿ ಧರ್ಮ ಹಾಗೂ ಆಚರಣೆಯ ವ್ಯಾಖ್ಯಾನವನ್ನೇ ಭಿನ್ನಗೊಳಿಸಿತು. ಸಾಮಾಜಿಕ ಅಸ್ತಿರತೆಯ ಪರಿಣಾಮ ಮಂಕಾಗಿ ಶಿಥಿಲಗೊಂಡಿದೆ ಮ್ರಾಕ್ ಯೂ. ಸದ್ಯ ಮ್ರಾಕ್ ಯೂಗೆ ಯಾವ ಚಾರಿತ್ರಿಕ ಕುತೂಹಲಿ ಪ್ರವಾಸಿಗಳು ಬರುತ್ತಿಲ್ಲ. ಹೀಗಂತ ಬಿಡಿಬಿಡಿಯಾಗಿ ಮ್ರಾಕ್ ಯೂ ಎಂಬ ಪ್ರದೇಶದ ಬಗ್ಗೆ ನಿಮಗೆ ಹೇಳಿದ್ರೆ ನಿಮಗರ್ಥವಾಗುವುದಿಲ್ಲ. ನೀವು ಅಹಿಂಸಾ ಸಮರ್ಥಕ ಬುದ್ಧನ ಅಶಾಂತ ಮನಸನ್ನು ಅರಿಯಬೇಕಿದ್ದರೇ ಮ್ರಾಕ್ ಯೂಗೆ ಹೋಗಬೇಕು.
ಚಾರಿತ್ರಿಕ ಮಹತ್ವ ಸಾರುವ ಸಾವಿರಾರು ಶಿಲಾ ಸ್ಮಾರಕಗಳು. ಶಾಂತಿದೂತ ಬುದ್ದನ ಕುರುಹು ಒಡಲಲ್ಲಿಟ್ಟುಕೊಂಡರೂ ಭಯದ ನೆರಳಲ್ಲಿ ಬದುಕುತ್ತಿರುವ ನಾಡು. ಶ್ರೇಷ್ಟ ಪ್ರವಾಸಿ ತಾಣವಾಗಬೇಕಿದ್ದ ಪ್ರದೇಶದಲ್ಲಿ ನಿರಂತರ ಸಮಾಜಿಕ ಕ್ಷೋಭೆ. ಇದು ಮಯನ್ಮಾರ್ ನ ಮ್ರಾಕ್ ಯೂ ಎಂಬ ಬೌದ್ಧ ಸಂಪ್ರದಾಯದ ಮೂಲನೆಲೆಯಾದ ಪಟ್ಟಣದ ಅವಸ್ಥೆ. ಇಂತದ್ದೊಂದು ಚಾರಿತ್ರಿಕ ಅನನ್ಯತೆ ಬೇರೆ ಯಾವುದೇ ರಾಷ್ಟ್ರದಲ್ಲಿದ್ದರೆ ಇಷ್ಟರೊಳಗಾಗಿ ಇದೊಂದು ಪ್ರಪಂಚದ ದಿ ಬೆಸ್ಟ್ ಪ್ರವಾಸಿ ತಾಣವೆಂದು ಕರೆಸಿಕೊಳ್ಳುತ್ತಿತ್ತು. ಆದ್ರೆ ದುರದೃಷ್ಟದ ಸಂಗತಿ ಆ ಪ್ರದೇಶ ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದ್ದರೂ, 700ಕ್ಕೂ ಹೆಚ್ಚು ಪ್ರಾಚೀನ ದೇಗುಲಗಳನ್ನು ಹೊಂದಿದ್ದರೂ ನಿತ್ಯ ಭಯ ಅಭದ್ರತೆಯ ನಡುವೆ ಬದುಕುವ ಜನ ತಮ್ಮ ಮೂಲ ಸಿದ್ಧಾಂತ ಹಾಗೂ ಪರಂಪರೆಯನ್ನೇ ಮರೆತುಬಿಟ್ಟಿದ್ದಾರೆ.
ಭಾರತದ ಭವ್ಯ ಸನಾತನ ಸಂಸ್ಕೃತಿಯ ಛಾಯೆಯಲ್ಲಿ ತನ್ನ ಸಂಸ್ಕೃತಿಯನ್ನು ಉತ್ಕೃಷ್ಟಗೊಳಿಸಕೊಂಡು ನಾಡು ಮಯನ್ಮಾರ್. ಭಾರತ ಜಗತ್ತಿಗೆ ಕೊಟ್ಟ ಬೌದ್ಧ ಧರ್ಮವನ್ನು ಎದೆಗಪ್ಪಿಕೊಂಡು ತನ್ನ ಪರಂಪೆಯನ್ನು ಮುಂದುವರೆಸಿಕೊಂಡು ಬಂದ ನೆಲವದು. ಭಾರತದ ಮಗ್ಗುಲಲ್ಲೇ ತನ್ನ ಶ್ರೀಮಂತ ಸಂಸ್ಕೃತಿಯ ಜೊತೆ ಬದುಕುತ್ತಿರುವ ಹಾಗೂ ತನ್ನ ಸಾಂಸ್ಕೃತಿಕ ಔನ್ನತ್ಯವನ್ನೇ ಮರೆತು ಮಲಗಿರುವ ಆ ರಾಷ್ಟ್ರ ಬರ್ಮಾ ಅಥವಾ ಮಯನ್ಮಾರ್.
ಮಯನ್ಮಾರ್ನ ರೇಕಿನ್ ಪ್ರಾಂತ್ಯದ ಮ್ರಾಕ್ ಯೂ ಪಟ್ಟಣ ಸುದೀರ್ಘ ಹಲವು ಶತಮಾನಗಳ ಇತಿಹಾಸವನ್ನು ತನ್ನೊಡಲಲ್ಲಿ ಹೊತ್ತು ಮಲಗಿದೆ. ಕಲಾದನ್ ನದಿ ಪಾತ್ರದಲ್ಲಿರುವ ಮ್ರಾಕ್ ಯೂ ಪಟ್ಟಣದಲ್ಲಿ ಬರೋಬ್ಬರಿ 700ಕ್ಕೂ ಹೆಚ್ಚು ಪುರಾತನ ದೇಗುಲಗಳು, ಪಗೋಡಾಗಳು, ಬೌದ್ಧ ಸ್ತೂಪಗಳು ಇವೆ. ಹೆಜ್ಜೆ ಹೆಜ್ಜೆಗೂ ಚಾರಿತ್ರಿಕ ಸೌಂದರ್ಯದ ಕುರುಹುಗಳು ಎಡತಾಕುತ್ತವೆ. ನೂರಾರು ಬುದ್ಧನ ಪ್ರತಿಮೆಗಳು, ಹಿಂದೊಮ್ಮೆ ಇಲ್ಲಿ ಆವರಿಸಿಕೊಂಡಿದ್ದ ಬೌದ್ಧ ಧರ್ಮ ಸಂಸ್ಕೃತಿಗಳ ಕಥೆ ಹೇಳುತ್ತವೆ. ಎತ್ತ ನೋಡಿದ್ರೂ ಒಂದಲ್ಲ ಒಂದು ಪ್ರಾಚೀನ ಶಿಲಾಸ್ಮಾರಕಗಳು, ಪಾರಂಪರಿಕ ಕಟ್ಟಡಗಳು ತನ್ನ ಇರುವಿಕೆಯನ್ನು ಸಾರುತ್ತವೆ.
ಇಂತೊದ್ದೊಂದು ಅದ್ಭುತ ಶಿಲಾ ಸ್ಮಾರಕಗಳ ಹಂದರ ಹೊಂದಿರುವ ಪ್ರದೇಶ, ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಇಷ್ಟರಲ್ಲಾಗಲೇ ಟೂರಿಸಂ ಹಾಟ್ಸ್ಪಾಟ್ ಎಂದಾಗಿ ಕರೆಸಿಕೊಳ್ಳುತ್ತಿತ್ತು. ಆದರೆ ಆಳುವ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ, ಅಲ್ಲಿನ ಜನಪ್ರತಿನಿಧಿಗಳಲ್ಲಿ ಕಣ್ಮರೆಯಾದ ಐತಿಹಾಸಿಕ ಪ್ರಜ್ಞೆ, ತಮ್ಮ ಚರಿತ್ರೆಯ ಮಹತ್ವವನ್ನೇ ಮರೆತಿರುವ ಸಮುದಾಯಗಳು ತಮ್ಮ ನೆಲದ ಶ್ರೇಷ್ಟತೆಯನ್ನು ಅರಿಯದೆ ಅಜ್ಞಾನಿಗಳಾಗಿ ಬದುಕುತ್ತಿದ್ದಾರೆ. ಮುಖ್ಯವಾಗಿ ಶಾಂತಿಧೂತ ಬುದ್ದನ ನೆಲದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ರೋಹಿಂಗ್ಯಾ ಹಾಗೂ ಉಳಿದ ಸಮುದಾಯಗಳ ನಡುವಿನ ರಕ್ತಕದನ, ಮ್ರಾಕ್ ಯೂನ ಅನನ್ಯತೆಯನ್ನು ಮರೆಮಾಚಿ ಭಯ ಹಾಗೂ ಅಭದ್ರತೆಯ ವಾತಾವರಣ ಸೃಷ್ಟಿಸಿದೆ.
ಮ್ರಾಕ್ ಯೂ ಅನ್ನು ಮೊದಲು ಮ್ಯೂ ಹಾಂಗ್ ಎಂದು ಕರೆಯಲಾಗ್ತಿತ್ತು. ಉತ್ತರ ರೇಖಿನ್ ಪ್ರಾಂತ್ಯದ ಪುರಾತತ್ವ ಇಲಾಖೆಯ ಮಹತ್ವದ ಪ್ರದೇಶ ಈ ಮ್ರಾಕ್ ಯೂ. 1430ರಿಂದ 1785ರವರೆಗೂ ಈ ಪ್ರದೇಶ ಅರಾಕನೀಸ್ ಅಥವಾ ರೇಖಿನ್ ಮಹಾ ಸಾಮ್ರಾಜ್ಯದ ಮ್ರಾಕ್ ಯೂ ರಾಜ ಸಂಸ್ಥಾನದ ರಾಜಧಾನಿಯಾಗಿತ್ತು. ಕಲಾದನ್ ನದಿಯ ಪೂರ್ವಕ್ಕೆ 11 ಕಿಮಿ ದೂರವಿರುವ ಈ ಪುಟ್ಟ ಪಟ್ಟಣ ಕಲಾದನ್ ಉಪನದಿಯ ದಂಡೆಯಲ್ಲಿದೆ. ನದಿ, ಸರೋವರ, ಸಮೃದ್ಧ ಅರಣ್ಯ ಮಿಳಿತ ಗುಡ್ಡಗಾಡು ಮ್ರಾಕ್ ಯೂ ಪಟ್ಟಣದ ಸಹಜ ಸೌಂದರ್ಯಕ್ಕೆ ಕಳಶವಿಟ್ಟಂತಿದೆ. ಇಲ್ಲಿ ವಾರ್ಷಿಕ ಸರಾಸರಿ 1200 ಮಿಲಿಮೀಟರ್ ಮಳೆಯಾಗುತ್ತದೆ. ಹಾಗಾಗಿ ವರ್ಷದ ಬಹುತೇಕ ಋತುಗಳಲ್ಲಿ ಇಲ್ಲಿ ಶೀತಲ ವಾತಾವರಣವಿರುತ್ತದೆ.
ಮ್ರಾಕ್ ಯೂನ ಎಲ್ಲ ಪ್ರಮುಖ ದೇವಾಲಯಗಳು ಈಗಲೂ ತಮ್ಮ ಪುರಾತನ ವಾಸ್ತುಶಿಲ್ಪ ಹಾಗೂ ಭವ್ಯತೆಯನ್ನು ಉಳಿಸಿಕೊಂಡು ನಿಂತಿವೆ. ಶಿತೆ-ತವಾಂಗ್ ದೇವಾಲಯ, ಹಟುಕಾಂಥಿನ್ ದೇಗುಲ, ಕೋಯಿ-ತವಾಂಗ್, ಆಂಡೋ ತೇಯಿನ್ ಸಭಾಭವನ, ಲೇ-ಮ್ಯೇಟ್-ಹನಾ ದೇಗುಲ, ರಥನಾ-ಪೋನ್, ಫೈವ್ ಮ್ಯಾನ್ ಪಗೋಡಾ, ಮಿಂಗಲಾ ಮ್ಯಾನ್ ಆಂಗ್ ಪಗೋಡಾ, ರಥನಾ ಮ್ಯಾನ್ ಆಂಗ್ ಪಗೋಡಾ, ಸಕ್ಯಾ ಮ್ಯಾನ್ ಆಂಗ್ ಪಗೋಡಾ, ಲಾವ್ಕ್ ಮ್ಯಾನ್ ಆಂಗ್ ಪಗೋಡಾ, ಜಿನಾ ಮ್ಯಾನ್ ಆಂಗ್ ಪಗೋಡಾ, ಸಂಡಾ ಮೂನಿ ಟೆಂಪಲ್, ಬಂಡುಲಾ ಕ್ಯೂ ಆಂಗ್ ಮಾನೆಸ್ಟರಿ ಮುಂತಾದ ದೇವಾಲಯಗಳ ವಿಶೇಷತೆ ಹಾಗೂ ಭವ್ಯತೆಗಳು ಅದ್ಭುತ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಮ್ರಾಕ್ ಯೂ ಬೌದ್ಧರ ಪ್ರಮುಖ ನೆಲೆ ಆದರೂ ಇಲ್ಲಿ ಉಳಿದ ಧರ್ಮಗಳ ಆಲಯಗಳು ಹಾಗೂ ಪ್ರಾರ್ಥನಾ ಮಂದಿರಗಳಿವೆ.. ಮಿನ್ ಸಾ ಮೂನ್ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನುಲಾಗುವ ಸಾಂತಿಕನ್ ಮಸೀದಿ ಇದೆ. ರೋಮನ್ ಕ್ಯಾಥೋಲಿಕ್ಕರ ಚರ್ಚ್ ಸಹ ಇದೆ.
1433ರಲ್ಲಿ ಕಿಂಗ್ ಮಿನ್ ಸಾ ಮೂನ್ ಈ ಮ್ರಾಕ್ ಯೂ ನಗರವನ್ನು ಏಕೀಕೃತ ಅರಾಕನೀಸ್ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿಕೊಂಡಿದ್ದ. ಸುಮಾರು 1 ಲಕ್ಷದ 60 ಸಾವಿರ ಜನ ಇಲ್ಲಿದ್ದರು ಅನ್ನುವ ಚಾರಿತ್ರಿಕ ಉಲ್ಲೇಖಗಳಿವೆ. 1784ರ ತನಕ ಈ ಮ್ರಾಕ್ ಯೂ ಅಥವಾ ಅರೇಕನೀಸ್ ಸಾಮ್ರಾಜ್ಯವನ್ನು 49 ರಾಜರು ಆಳ್ವಿಕೆ ನಡೆಸಿದ್ದರು.
ಶಿತೇ ತವಾಂಗ್ ದೇವಾಲಯವನ್ನು ಟೆಂಪಲ್ ಆಫ್ ವಿಕ್ಟರಿ ಅಂತ ಕರೆಯಲಾಗ್ತಿತ್ತು. ಇಲ್ಲಿ ಈಗಲೂ ಅದರ ಕುರುಹಾಗಿ 80 ಸಾವಿರದಷ್ಟು ಕಲಾಕೃತಿಗಳನ್ನು ಕೆತ್ತಲಾಗಿದೆ. ಕೋಯಿ-ತವಾಂಗ್ ದೇಗುಲದಲ್ಲಿ 90 ಸಾವಿರ ವರ್ಣಚಿತ್ರಗಳಿದ್ದರೇ, ಇಂತದ್ದೇ ಸಾಂಪ್ರದಾಯಿಕ ಚಿತ್ರಕಲೆ ಹಟುಕಾಂತಿನ್ ಹಾಗೂ ಫೈವ್ ಮಾನ್ ಪಗೋಡಾದಲ್ಲಿಯೂ ಇವೆ. 2017ರಲ್ಲಿ ಅಂತರಾಷ್ಟ್ರೀಯ ಆಯೋಗ ಮ್ರಾಕ್ ಯೂ ಪ್ರದೇಶವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಮನವಿ ಮಾಡಿಕೊಳ್ಳುವಂತೆ ಮಯನ್ಮಾರ್ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ ಮಯನ್ಮಾರ್ ಸರ್ಕಾರದ ನಿರ್ಲಕ್ಷ ಧೋರಣೆಯಿಂದ ಇದು ಸಾಧ್ಯವಾಗಲಿಲ್ಲ.
ಮ್ರಾಕ್ ಯೂನಲ್ಲಿ ಸರಿಯಾದ ಮೂಲಸೌಕರ್ಯಗಳೇ ಇಲ್ಲ. ಉತ್ತಮವಾದ ರಸ್ತೆಗಳಿಲ್ಲ, ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಗಳಿಲ್ಲ, ಕನಿಷ್ಟ ಅಗತ್ಯ ಶೈಕ್ಷಣಿಕ ಸೌಕರ್ಯಗಳೂ ಇಲ್ಲ. ಇಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮೇಲ್ವರ್ಗದವರೆಂದು ಗುರುತಿಸಿಕೊಳ್ಳುವ ಕುಟುಂಬಗಳೂ ಸಹ ಇಲ್ಲ.
ಕಲಾದನ್ ನದಿಯ ಉಪನದಿಗಳಿಗೆ ಯಾವುದೋ ಕಾಲದಲ್ಲಿ ಕಟ್ಟಿಕೊಂಡ ಮರದ ಹಲಗೆಗಳ ಸೇತುವೆಯ ಮೇಲೆ ಭೀತಿಯಿಂದ ಹೆಜ್ಜೆ ಇಡುವ ಮ್ರಾಕ್ ಯೂ ಜನ, ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಹಳೆಯ ಮಾದರಿಯ ಕೃಷಿ ಮಾಡಿ ಬದುಕುವ ಬಡ ರೈತರು, ಮಾರುಕಟ್ಟೆಯಲ್ಲಿ ತಾವು ಬೆಳೆದ ಫಸಲನ್ನು ಮಾರಿ ಅಂದಿನ ಹೊಟ್ಟೆ ತುಂಬಿಸಿಕೊಳ್ಳುವ ಅಮಾಯಕ ಮಂದಿ, ಪ್ರಾಚೀನ ದೇವಾಲಯಗಳಲ್ಲಿ ಕೆಂಪು ಮಡಿ ಉಟ್ಟು ಭಯ, ಸಂಕಟ ಅಭದ್ರತೆಗಳ ನಡುವೆ ಬುದ್ಧನ ಪೂಜೆ ಮಾಡುವ ಬೌದ್ಧ ಬಿಕ್ಕುಗಳು, ಆಲಯಗಳ ಮುಂದಿನ ಬಯಲಿನಲ್ಲಿ ಭವಿಷ್ಯದ ಚಿಂತೆಯೇ ಇಲ್ಲದೆ ಆಡಿಕೊಳ್ಳುವ ಮುಗ್ದ ಮಕ್ಕಳು ಇವಿಷ್ಟು ಮ್ರಾಕ್ ಯೂ ನಲ್ಲಿ ಸದ್ಯ ಕಾಣಸಿಗುವ ಸರ್ವೇಸಾಮಾನ್ಯ ದೃಶ್ಯಗಳು.
ಡಚ್ ಕಲಾವಿದನೊಬ್ಬ ಚಿತ್ರಿಸಿರುವಂತೆ 17ನೇ ಶತಮಾನದಲ್ಲಿ ಮ್ರಾಕ್ ಯೂ ಏಷ್ಯಾದ ಪ್ರಮುಖ ವ್ಯಾಪಾರ ವಹಿವಾಟುಗಳ ಪ್ರದೇಶವಾಗಿತ್ತು. 1784ರಲ್ಲಿ ಅರಾಕನ್ ಅಥವಾ ಈ ಮ್ರಾಕ್ ಯೂ ಪ್ರದೇಶವನ್ನು ಬರ್ಮೀಯ ರಾಜ ಬೋದವ್ಪಾಯ ಬಲವಂತವಾಗಿ ವಶಪಡಿಸಿಕೊಂಡ. ಆಗ ಸಾವಿರಾರು ಸ್ಥಳೀಯ ನಿವಾಸಿಗಳನ್ನು ಗುಲಾಮರನ್ನಾಗಿಸಿಕೊಳ್ಳಲಾಯಿತು. ಇನ್ನು ಕೆಲವು ಸಾವಿರ ಜನರನ್ನು ಬಲವಂತವಾಗಿ ಬ್ರಿಟೀಶ್ ಆಳ್ವಿಕೆಯಲ್ಲಿದ್ದ ಬಂಗಾಳಕ್ಕೆ ಗಡಿಪಾರು ಮಾಡಲಾಯ್ತು. ಅದಾದ 42 ವರ್ಷಗಳ ನಂತರ ಈ ಭಾಗವನ್ನು ಆಕ್ರಮಿಸಿಕೊಂಡ ಬ್ರಿಟೀಶ್ ಪ್ರಭುಗಳು ಬರ್ಮಾದಾದ್ಯಂತ ತಮ್ಮ ವಸಾಹತು ಆಡಳಿತವನ್ನು ಹೇರಿದರು. ಆ ಸಮಯದಲ್ಲಿ ಮತ್ತೆ ತಿರುಗಿ ಬಂಗಾಳದಿಂದ ವಾಪಾಸ್ ಬಂದ ನಿರಾಶ್ರಿತರೇ ಈಗ ದೌರ್ಜನ್ಯಕ್ಕೊಳಗಾಗುತ್ತಿರುವ ರೋಹಿಂಗ್ಯಾ ಸಮುದಾಯ.
ಇಲ್ಲಿನ ಸ್ಥಿತಿ ಈಗಲೂ ವಸಾಹತುಶಾಹಿ ಆಡಳಿತದಂತೆ ಇದೆ. ನೂರಾರು ರೋಹಿಂಗ್ಯಾಗಳ ಗ್ರಾಮ ನಾಶ ಪಡಿಸಿ, ಅಸಂಖ್ಯಾತ ರೋಹಿಂಗ್ಯಾ ಸಮುದಾಯಗಳನ್ನು ಹೊರಹಾಕಿದ ಆಡಳಿತ, ಆ ಸಂದರ್ಭದಲ್ಲಿ ನಡೆದ ರಕ್ತಸಿಕ್ತ ಘಟನೆಗಳಿಗೆ ನೇರ ಹೊಣೆ ಅಂತಾನೆ ಇಲ್ಲಿನ ಸ್ಥಳೀಯ ಟೂರ್ ಗೈಡ್ ಹಾಗೂ ಅರಾಕನ್ ನ್ಯಾಷನಲ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತೂನ್ ನೇ. ರೇಕಿನೇ ಬೌದ್ಧ ಧರ್ಮೀಯರು ತಮ್ಮನ್ನು ತಾವು ಮೂಲ ಬರ್ಮೀಯರು ಎಂದು ಕರೆದುಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಅವರಲ್ಲಿದ್ದ ಜನಾಂಗೀಯ ಹಮ್ಮು ಸ್ಥಳೀಯ ರೋಹಿಂಗ್ಯಾ ಸಮುದಾಯದ ವಿರುದ್ಧ ತೀವ್ರ ಅಸಮಧಾನ ಮೂಡಿಸಿತ್ತು. ಸರ್ಕಾರವೂ ಈ ಬೌದ್ಧ ಧರ್ಮೀಯರ ಪರವಾಗಿ ವರ್ತಿಸಿತ್ತು. ಇದೇ ರೋಹಿಂಗ್ಯಾ ಹಾಗೂ ಇತರೆ ಕೆಳ ಸಮುದಾಯಗಳ ವಿರುದ್ಧ ಬೌದ್ಧ ಧರ್ಮೀಯರ ಜನಾಂಗೀಯ ಕಲಹಕ್ಕೆ ಮೂಲಕಾರಣ.
ಚಾರಿತ್ರಿಕ ಪಾರಂಪರಿಕ ತಾಣ ಮ್ರಾಕ್ ಯೂನಲ್ಲಿ, ಮಹಿಳೆಯರು ಮಕ್ಕಳೂ ಸೇರಿದಂತೆ ಬರೋಬ್ಬರಿ 70ಕ್ಕೂ ಹೆಚ್ಚು ರೋಹಿಂಗ್ಯಾ ಸಮುದಾಯವರನ್ನು ಕೊಲ್ಲಲಾಗಿದೆ. ಮ್ರಾಕ್ ಯೂಗೆ ಹತ್ತಿರವಿರುವ ಸಿತ್ವೇ ವಿಮಾನ ನಿಲ್ದಾಣದಲ್ಲಿ ವಿದೇಶಿಯರಿಗೆ, ಅನುಮತಿ ಇಲ್ಲದೇ ಸ್ಥಳೀಯ ರೋಹಿಂಗ್ಯಾಗಳನ್ನು ಸಂದರ್ಶಿಸಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗ್ತಿದೆ. ಕೇವಲ ಮಯನ್ಮಾರ್ ಇತಿಹಾಸದ ಬಗ್ಗೆ ಕುತೂಹಲ ಹೊಂದಿರುವ ಕೆಲವರು, ಪುರಾತತ್ವ ಸಂಶೋಧಕರು ಹಾಗೂ ಚರಿತ್ರೆಯ ವಿದ್ಯಾರ್ಥಿಗಳು ಮಾತ್ರ ಮ್ರಾಕ್ ಯೂಗೆ ಬರುತ್ತಾರೆ. ಮಯನ್ಮಾರ್ ಆಡಳಿತ ಹಾಗೂ ಮ್ರಾಕ್ ಯೂನ ಅಭದ್ರ ಸಾಮಾಜಿಕ ವಾತಾವರಣ ತನ್ನ ಒಂದು ಭವ್ಯ ಚಾರಿತ್ರಿಕ ಸ್ಥಳದ ಮಹತ್ವವನ್ನು ಸರ್ವನಾಶ ಮಾಡ್ತಿರೋದು ನಿಜಕ್ಕೂ ವಿಪರ್ಯಾಸ.
ಧರ್ಮ ಹಾಗೂ ಆಚರಣೆಯ ಶ್ರೇಷ್ಟತೆಯ ಅಹಂಕಾರ ಬುದ್ದನ ಭಕ್ತರನ್ನು ಆವರಿಸಿದೆ. ಬಡ ರೋಹಿಂಗ್ಯಾ ಸಮುದಾಯ ನಿತ್ಯ ಭಯ-ಅಭದ್ರತೆಯಲ್ಲಿ ಬದುಕ್ತಿದ್ದಾರೆ. ಈ ಸಾಮಾಜಿಕ ಅಸ್ತಿರತೆಯ ಪರಿಣಾಮ ಅತ್ಯಂತ ಶ್ರೀಮಂತ ಚರಿತ್ರೆಯ ಕಥೆ ಹೇಳಬೇಕಿದ್ದ ಮ್ರಾಕ್ ಯೂ ದಿನೇ ದಿನೇ ಮಂಕಾಗುತ್ತ ಶಿಥಿಲಗೊಳ್ತಿದೆ. ಬುದ್ಧ ಎಂದರೆ ಬೆಳಕು, ಅರಿವು, ಜ್ಞಾನ; ಬುದ್ಧನೆಂದರೇ ದಯೆ, ಕರುಣೆ, ಪ್ರೀತಿ, ಶಾಂತಿ. ಆದರೆ ಶ್ರೇಷ್ಟತೆಯ ವ್ಯಸನ ತುಂಬಿಕೊಂಡ ಅಹಂಕಾರಿ ಬುದ್ದನ ಭಕ್ತರಿಂದ ಬುದ್ದನ ಪವಿತ್ರ ಭೂಮಿ ರಕ್ತಸಿಕ್ತವಾಗಿದ್ದಷ್ಟೇ ಅಲ್ಲ, ಬುದ್ಧನ ಸಿದ್ದಾಂತಗಳು ಮತ್ತು ಅಹಿಂಸೆಯೆಂಬ ಮೂಲನೆಲೆಯೇ ಧ್ವಂಸಗೊಂಡಿದೆ.
– (ವಿಭಾ) ವಿಶ್ವಾಸ್ ಭಾರದ್ವಾಜ್