ನಂದಿ ಗಿರಿ ಶೃಂಗದ ಚೆನ್ನಗಿರಿ ಫಾಲ್ಸ್ ನಲ್ಲಿ ಅರ್ಕಾವತಿಯ ಭವ್ಯ ವೈಭವದ ಜಲಧಾರೆ
ಕಾವೇರಿಯ ಪ್ರಮುಖ ನದಿಯಾದ ಅರ್ಕಾವತಿ ನದಿಯ ಉಗಮಸ್ಥಾನ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಚನ್ನಗಿರಿ ಪಾಲ್ಸ್. ಬಹಳಷ್ಟು ಬೆಂಗಳೂರಿಗರಿಗೆ ತಮ್ಮ ಪಕ್ಕದಲ್ಲೇ ಇರುವ ಈ ರಮ್ಯ ಮನೋಹರ ಜಲಧಾರೆಯ ವಿಚಾರ ಗೊತ್ತಿಲ್ಲ. ನಂದಿಬೆಟ್ಟದ ಪಕ್ಕದಲ್ಲಿರುವ ಚಿಕ್ಕರಾಯಪನಹಳ್ಳಿ ಬಳಿಯಲ್ಲಿದೆ ಈ ಚೆನ್ನಗಿರಿ ಫಾಲ್ಸ್. ಈಗ ಶುರುವಾಗಿರುವ ಮುಂಗಾರಿನಿಂದಾಗಿ ತುಂಬಿ ಧುಮ್ಮುಕ್ಕುತ್ತಿರುವ ಅರ್ಕಾವತಿಯ ಚೆನ್ನಗಿರಿ ಫಾಲ್ಸ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ನಮ್ಮ ಬೆಂಗಳೂರಿಗೆ ಕೂಗಳತೆಯ ಸಮೀಪದಲ್ಲೆ ಹೀಗೆ ಮಲೆನಾಡ ಮೈಸಿರಿ ಹೊತ್ತ ಜಲವೈಭವದ ಮೇಳವಿದೇ. ಚನ್ನಗಿರಿ ಗಿರಿಶ್ರೇಣಿಯಲ್ಲಿ ಅರ್ಕಾವತಿ ಜೊತೆಗೆ ಉತ್ತರ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಉಗಮಸ್ಥಾನವಿದೆ. ನಂದಿಗಿರಿಯಲ್ಲಿ ಪಾಲಾರ್ ನದಿ ಹುಟ್ಟಿದರೇ, ದಿಬ್ಬಗಿರಿಯಲ್ಲಿ ಹುಟ್ಟುವ ಸಣ್ಣ ಕಾಲುವೆಯೊಂದು ಅರ್ಕಾವತಿಗೆ ಸೇರುತ್ತವೆ. ಇನ್ನು ವಿಷ್ಟುಗಿರಿಯಲ್ಲಿ ಸಣ್ಣ ಝರಿಯೊಂದು ಜನಿಸಿ ದಕ್ಷಿಣ ಪಿನಾಕಿನಿ ನದಿಯ ಒಡಲು ಸೇರುತ್ತದೇ. ನಂದಿಕಣಿವೆಯ ಪಂಚಗಿರಿಗಳಲ್ಲಿ ಪಂಚನದಿಗಳು ಹುಟ್ಟಿ ಹರಿಯುತ್ತವೆ.
ಅರ್ಕಾವತಿ ನದಿ ನಂದಿಬೆಟ್ಟದ ಟಿಪ್ಪು ಡ್ರಾಪ್ ಬಳಿಯ ಮೂಲದಲ್ಲಿ ಹುಟ್ಟಿ ಗುಪ್ತಗಾಮಿನಿಯಾಗಿ, ಚನ್ನಗಿರಿ ಬೆಟ್ಟದ ಪಾಲ್ಸ್ ನಿಂದ ಹರಿಯುವ ನೀರು ಏಳೆಮ್ಮೆ ದೊಣೆಯಲ್ಲಿ ಸೇರಿ ನಂತರ ಚಿಕ್ಕರಾಯಪನಹಳ್ಳಿಯಲ್ಲಿ ತನ್ನ ಮೊದಲ ಕೆರೆ ಕೋಡಿ ಹರಿಸಿ, ಮುಂದೆ ಮೆಳೆಕೋಟೆ, ಕೊನಘಟ್ಟ, ದೊಡ್ಡಬಳ್ಳಾಪುರ ದೊಡ್ಡಕೆರೆ, ದೇವನಹಳ್ಳಿ ತಾಲೂಕಿನ ಕೆಲಭಾಗ ಹರಿದು, ಸೊಣ್ಣೇನಹಳ್ಳಿ ಕೆರೆ, ಹೆಸರಘಟ್ಟ ಕೆರೆ,
ಮಾಕಳಿ, ಸೊಂಡೆಕೊಪ್ಪ, ನಂತರ ತಿಪ್ಪಗೊಂಡನಹಳ್ಳಿ ಜಲಾಶಯ, ಬಳಿಕ
ಮಂಚನಬೆಲೆ ಜಲಾಶಯದ ಮೂಲಕ ಮಂಡ್ಯ ಜಿಲ್ಲೆಯ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಸಂಗಮವಾಗುತ್ತದೇ. ಇಲ್ಲಿ ವಿಶೇಷವೆಂದರೇ ನಂದಿಕಣಿವೆಯಲ್ಲಿ ಹುಟ್ಟುವ ಎಲ್ಲಾ ನದಿಗಳು ಕೆರೆಯಿಂದ ಕೆರೆಗೆ ಕೋಡಿ ರೂಪದಲ್ಲಿ ಹರಿಯುವ ನದಿಗಳೆ.
ಅರ್ಕಾವತಿಯ ಹರಿವಿನ ಮಾರ್ಗ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಕೊನೆಗೆ ಮಂಡ್ಯ, ಹೀಗೆ ಐದು ಜಿಲ್ಲೆಗಳನ್ನು ಹಾದು ಹೋಗುವ ಈ ನದಿ ಸುಮಾರು 161 ಕಿಲೋ ಮೀಟರ ಉದ್ದ ಪ್ರವಹಿಸುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಅರ್ಕಾವತಿ ನದಿಗೆ ನೆಲಮಂಗಲದ ದಕ್ಷಿಣದ ಕಡೆಯಿಂದ ಬರುವ ಕುಮುದ್ವತಿ, ಬೆಂಗಳೂರಿನ ಕಡೆಯಿಂದ ಬರುವ ವೃಷಭಾವತಿಗಳು ಇದರ ಉಪನದಿಗಳಿವೆ.








