ವೈಯಕ್ತಿಕ ವಿಚಾರಗಳ ಬಗ್ಗೆ ಟೀಕೆ ಮಾಡುವ ವಿರೋಧ ಪಕ್ಷದ ನಾಯಕರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಶ್ರಮ, ನನ್ನ ಸಂಪಾದನೆ ಹಾಗೂ ನನ್ನ ಆಸ್ತಿಯಲ್ಲಿ ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ. ಅದನ್ನು ಕೇಳಲು ನೀವು ಯಾರು ಎಂದು ಡಿಸಿಎಂ ನೇರವಾಗಿಯೇ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ತಮ್ಮ ಐಷಾರಾಮಿ ಜೀವನಶೈಲಿಯ ಮೇಲಿನ ಟೀಕೆಗಳಿಗೆ ಅಷ್ಟೇ ಖಾರವಾಗಿ ಸ್ಪಷ್ಟನೆ ನೀಡಿದರು. ನಾನು ನನ್ನ ಸ್ವಂತ ದುಡ್ಡಿನಲ್ಲಿ ಎಷ್ಟು ವಾಚ್ ಬೇಕಾದರೂ ಖರೀದಿ ಮಾಡುತ್ತೇನೆ, ಆರ್ಥಿಕವಾಗಿ ಆ ಶಕ್ತಿ ನನಗಿದೆ. ಯಾರು ಯಾವ ಪ್ಯಾಂಟ್, ಯಾವ ವಾಚ್ ಅಥವಾ ಕನ್ನಡಕ ಹಾಕುತ್ತಾರೆ ಎಂಬುದು ಅವರವರ ವೈಯಕ್ತಿಕ ವಿಚಾರ ಎಂದು ಸಮರ್ಥಿಸಿಕೊಂಡರು.
ನನ್ನ ದುಡ್ಡು, ನನ್ನ ಇಷ್ಟ
ಕೆಲವರು ಒಂದು ಸಾವಿರದ ಶೂ ಧರಿಸಿದರೆ ಮತ್ತೆ ಕೆಲವರು 1 ಲಕ್ಷದ ಶೂ ಧರಿಸುತ್ತಾರೆ. ಅಂತೆಯೇ ನಾನು 1 ಸಾವಿರ ರೂಪಾಯಿ ವಾಚನ್ನೂ ಕಟ್ಟುವೆ, 10 ಲಕ್ಷ ರೂಪಾಯಿ ವಾಚನ್ನೂ ಕಟ್ಟುವೆ. ಅದು ನನಗೆ ಬಿಟ್ಟ ವಿಚಾರ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ ಎಂದು ಡಿಕೆಶಿ ಗುಡುಗಿದರು.
ವಿರೋಧ ಪಕ್ಷದ ನಾಯಕರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಅವರಿಗೆ ಚುನಾವಣೆ ಎದುರಿಸಿದ ಸರಿಯಾದ ಅನುಭವವೂ ಇಲ್ಲ, ಹೀಗಾಗಿಯೇ ವಿಷಯಗಳ ಅರಿವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕೇವಲ ಅವರು ವಿರೋಧ ಪಕ್ಷದ ನಾಯಕ ಎಂಬ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ ಎಂಬ ಕಾರಣಕ್ಕೆ ನಾನು ಗೌರವ ಕೊಟ್ಟು ಪ್ರತಿಕ್ರಿಯೆ ನೀಡುತ್ತಿದ್ದೇನೆ, ಇಲ್ಲದಿದ್ದರೆ ಇಂತಹ ಮಾತುಗಳಿಗೆ ಉತ್ತರಿಸುತ್ತಿರಲಿಲ್ಲ. ನನ್ನ ವ್ಯವಹಾರ ಹಾಗೂ ನನ್ನ ಬದುಕಿನ ಬಗ್ಗೆ ಬಿಜೆಪಿಯ ಶೇಕಡಾ 90ರಷ್ಟು ನಾಯಕರಿಗೆ ಚೆನ್ನಾಗಿ ತಿಳಿದಿದೆ ಎಂದು ತಿರುಗೇಟು ನೀಡಿದರು.
ಇದೇ ವೇಳೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹೊಸ ಪರ್ವ ಆರಂಭವಾಗಲಿದೆ ಎಂದು ಸುಳಿವು ನೀಡಿದರು. ನಾವು ಜನರ ಪರವಾಗಿ ಕೆಲಸ ಮಾಡಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸುಮಾರು 1.11 ಲಕ್ಷ ಕೋಟಿಯಷ್ಟು ಹಣ ತಲುಪುತ್ತಿದೆ. ಈ ಸಾಧನೆ ಜನರಿಗೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಮಾಡುವ ಕುರಿತು ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೆ ಚರ್ಚಿಸಿದ್ದೇನೆ. ಸರ್ಕಾರಕ್ಕೆ ಹೊಸ ಆಲೋಚನೆಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.








