ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಾರಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ನೇಕಾರರ ಸಮಸ್ಯೆಗಳು, ರಾಜ್ಯದ ಅಭಿವೃದ್ಧಿ ವಿಚಾರಗಳು ಮತ್ತು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಪ್ರಮುಖ ಚರ್ಚಾ ವಿಷಯಗಳಾಗಲಿವೆ ಎಂದು ಅವರು ತಿಳಿಸಿದ್ದಾರೆ.
ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ಭರವಸೆಗಳನ್ನೇ ಪ್ರಶ್ನಿಸಿ, ಚುನಾವಣೆ ಸಮಯದಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುತ್ತೇವೆ, ನಿರುದ್ಯೋಗ ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ, ಇದು ಯಾವುದೂ ಈಡೇರಿಲ್ಲ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ರಾಜ್ಯದಲ್ಲಿ ಸರ್ಕಾರದ ವೈಫಲ್ಯ ಸ್ಪಷ್ಟವಾಗುತ್ತಿದ್ದಂತೆ, ಪ್ರತಿಯೊಂದು ವಿಷಯವನ್ನೂ ಕೇಂದ್ರ ಸರ್ಕಾರದ ಮೇಲೆ ಹೊರೆಹಾಕುವ ರಾಜಕೀಯವನ್ನು ಕಾಂಗ್ರೆಸ್ ಕೈಗೊಂಡಿದೆ ಎಂದು ಅವರು ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿದ ಮಾತುಗಳನ್ನು ಮರೆತು ಆಡಳಿತದ ಮೂಲ ಕೆಲಸಗಳನ್ನೇ ನಿರ್ಲಕ್ಷಿಸಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ರಾಜ್ಯದಲ್ಲಿನ ಸಾಮಾನ್ಯ ಜನರಿಂದ ಹಿಡಿದು ಉದ್ಯೋಗಾರ್ಥಿಗಳು, ನೇಕಾರರು, ರೈತರು ಎಲ್ಲರೂ ಸರ್ಕಾರದಿಂದ ನಿರೀಕ್ಷಿಸಿದ್ದ ಸಹಾಯ ಇನ್ನೂ ದಕ್ಕದಿರುವುದು ದುಃಖಕರ ಎಂದು ವಿಜಯೇಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ.








