ರಾಜ್ಯದಲ್ಲಿ ಭೂ ಸಂಬಂಧಿತ ಕಾನೂನುಗಳನ್ನು ಸ್ಮಾರ್ಟ್ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಬಹು ನಿರೀಕ್ಷಿತ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ಮಂಡನೆಗೆ ಬರುತ್ತಿದೆ. ರಾಜ್ಯ ರೆವಿನ್ಯೂ ಇಲಾಖೆಯ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್ನಲ್ಲಿ ಮಾತನಾಡಿ, ಈ ತಿದ್ದುಪಡಿಗೆ ಸಂಬಂಧಿಸಿದ ಕರಡು ಕಳೆದ ಅಕ್ಟೋಬರ್ ತಿಂಗಳಲ್ಲೇ ಪೂರ್ಣಗೊಂಡಿದ್ದು, ಮುಂದಿನ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಘೋಷಿಸಿದ್ದಾರೆ.
1964ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದರೂ, ನಂತರ ಅಗತ್ಯವಾದಷ್ಟು ಬದಲಾವಣೆಗಳನ್ನು ಸರ್ಕಾರಗಳು ಮಾಡಿರಲಿಲ್ಲ. ಭೂ ಹಕ್ಕು, ಪರಿವರ್ತನೆ, ದಾಖಲೆ ನಿರ್ವಹಣೆ ಹಾಗೂ ಭೂ ಬಳಕೆ ಸಂಬಂಧಿ ಅನೇಕ ಸಮಸ್ಯೆಗಳು ಬಾಕಿಯಾಗಿದ್ದವು.
ಈಗ, ಅದು ಭರ್ತಿಯಾಗುವಂತೆ ಸುಧಾರಿತ ತಿದ್ದುಪಡಿಗಳು ತರಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ತಿದ್ದುಪಡಿಯ ಪ್ರಮುಖ ಅಂಶಗಳು
ಕಲಂ 95ಗೆ ವ್ಯಾಪಕ ತಿದ್ದುಪಡಿ, ಭೂ ಪರಿವರ್ತನೆ (Conversion) ಪ್ರಕ್ರಿಯೆ ಸರಳೀಕರಣ.
ದಾಖಲೆ ಸಂಬಂಧಿತ ನಿಯಮಗಳನ್ನು ನವೀಕರಿಸುವ, ಡಿಜಿಟಲೀಕರಣಕ್ಕೆ ಬಲ.
ಭೂ ವಿವಾದಗಳು ತ್ವರಿತವಾಗಿ ಬಗೆಹರಿಸಲು ಹೊಸ ಮಾರ್ಗಸೂಚಿಗಳು.
ಕೃಷಿ, ನಿವಾಸಿ ಮತ್ತು ವಾಣಿಜ್ಯ ಬಳಕೆಗಾಗಿ ಭೂ ಪರಿವರ್ತನೆಗೆ ಸ್ಪಷ್ಟ ನಿಯಮ.
ರೈತರು ಮತ್ತು ಸಾಮಾನ್ಯ ನಾಗರಿಕರಿಗೆ ಸುಲಭವಾಗಿ ಅರಿವಾಗುವಂತೆ ನಿಯಮ ಪಾರದರ್ಶಕತೆ
ಸಚಿವ ಕೃಷ್ಣ ಬೈರೇಗೌಡ ಅವರು, ‘ರಾಜ್ಯದಲ್ಲಿ ಭೂ ನಿರ್ವಹಣೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಇದು ದೊಡ್ಡ ಹೆಜ್ಜೆ. ಅನಾವಶ್ಯಕ ದೂರು, ವಿಳಂಬ, ಭ್ರಷ್ಟಾಚಾರದ ಜಾಲವನ್ನು ಕಡಿತಗೊಳಿಸುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅಧಿಸೂಚನೆ ಹೊರಬಿದ್ದ ನಂತರ ಹೊಸ ನಿಯಮಗಳು ಜಾರಿಯಾಗಲಿದ್ದು, ರಾಜ್ಯದ ನಾಗರಿಕರು, ರೈತರು ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಇದು ಮಹತ್ವದ ಬದಲಾವಣೆಯಾಗಲಿದೆ.







