ಬೆಳಗಾವಿಯಲ್ಲಿ ಡಿನ್ನರ್ ಮೀಟಿಂಗ್ಗಳ ರಾಜಕಾರಣ ಭರ್ಜರಿಯಾಗಿ ನಡೆದಿರುವುದು ಈಗ ರಾಜ್ಯದ ರಾಜಕೀಯ ವಲಯದಲ್ಲೇ ಚರ್ಚೆಯಾಗಿದೆ. ನಿನ್ನೆ ರಾತ್ರಿ ಮಾಜಿ ಶಾಸಕ ಫಿರೋಜ್ ಸೇರ್ ಅವರ ಮನೆಯಲ್ಲಿ ಅಹಿಂದ ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಸಭೆ ನಡೆಸಿರುವುದು ಗಮನ ಸೆಳೆದಿದೆ.
ಈ ವಿಶೇಷ ಸಭೆಗೆ ಸ್ಪೀಕರ್ ಯು.ಟಿ. ಖಾದರ್, ಜಮೀರ್ ಅಹ್ಮದ್ ಖಾನ್, ಭೈರತಿ ಸುರೇಶ್, ಸಲೀಂ ಅಹ್ಮದ್ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಜರಾಗಿದ್ದರು. ಡಿನ್ನರ್ ಮಟ್ಟದಲ್ಲೇ ನಡೆದ ಈ ಚರ್ಚೆಯಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಪಕ್ಷದ ಒಳ ಗೊಂದಲ, ಮುಂದಿನ ತಂತ್ರಜ್ಞಾನ ಮತ್ತು ಹೈಕಮಾಂಡ್ ನಿರ್ಧಾರಗಳ ಬಗ್ಗೆ ಚರ್ಚೆಯಾಗಿರಬಹುದು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಇನ್ನೊಂದು ಕಡೆ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶಾಸಕರು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಂಪ್ಲಿ ಗಣೇಶ್, ಚಳ್ಳಕೆರೆ ರಘು, ಬಸನಗೌಡ ತುರವಿಹಾಳ್, ಬಸನಗೌಡ ದದ್ದಲ್ ಸೇರಿದಂತೆ ಹಲವು ಶಾಸಕರು ಪಾಲ್ಗೊಂಡಿದ್ದರು. ತಮ್ಮ ಸಮುದಾಯದ ರಾಜಕೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಒಂದೇ ರಾತ್ರಿ ಎರಡು ಬಣಗಳಲ್ಲಿ ನಡೆದ ಈ ಡಿನ್ನರ್ ಮತ್ತು ಪ್ರತ್ಯೇಕ ಸಭೆಗಳು ಕಾಂಗ್ರೆಸ್ನಲ್ಲಿ ಆಂತರಿಕ ಅಸಮಾಧಾನ, ನಾಯಕತ್ವ ಪ್ರಶ್ನೆ ಹಾಗೂ ಅಧಿಕಾರ ಹಂಚಿಕೆ ಚರ್ಚೆಗಳು ಮತ್ತೆ ತಲೆದೋರಿವೆ ಎಂಬ ಸೂಚನೆ ನೀಡುತ್ತಿವೆ.
ರಾಜ್ಯ ರಾಜಕೀಯದಲ್ಲಿ ‘ಡಿನ್ನರ್ ರಾಜಕೀಯ’ ಈಗ ದೊಡ್ಡ ಚರ್ಚೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಇವು ಯಾವ ದಿಕ್ಕಿಗೆ ತಿರುಗುತ್ತವೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.








