ಕ್ವಾರಂಟೈನ್ ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಕೊಲ್ಕತ್ತಾ, ಜುಲೈ 16: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹಿರಿಯ ಸಹೋದರ ಮತ್ತು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಜಂಟಿ ಕಾರ್ಯದರ್ಶಿ ಸ್ನೇಹ ಶೀಲ್ ಗಂಗೂಲಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಸೌರವ್ ಗಂಗೂಲಿ ಹೋಂ ಕ್ಯಾರೆಂಟೈನ್ ಗೆ ಒಳಗಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಂಗಾಳದ ಮಾಜಿ ಪ್ರಥಮ ದರ್ಜೆ ಆಟಗಾರ ಸ್ನೇಹ ಶೀಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ ಅವರನ್ನು ಇಲ್ಲಿನ ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳು ಬುಧವಾರ ಸಂಜೆ ತಡವಾಗಿ ಬಂದಿದ್ದು, ಆರೋಗ್ಯ ನಿಯಮಾವಳಿಗಳ ಪ್ರಕಾರ, ಸೌರವ್ ಸಹ ನಿಗದಿತ ಅವಧಿಗೆ ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷರ ಆಪ್ತ ಮೂಲವೊಂದು ತಿಳಿಸಿದೆ.

ಸೌರವ್ ತಮ್ಮ ಜನ್ಮದಿನವನ್ನು ಬೆಹಾಲಾದಲ್ಲಿರುವ ಅವರ ಪೂರ್ವಜರ ಮನೆಯಲ್ಲಿ ತಮ್ಮ ಇಡೀ ಕುಟುಂಬದೊಂದಿಗೆ ಆಚರಿಸಿದ್ದರು ಎಂದು ಹೇಳಲಾಗುತ್ತಿದ್ದು, ಇತ್ತೀಚೆಗಿನ ಆರೋಗ್ಯ ನಿಯಮಾವಳಿಗಳ ಪ್ರಕಾರ 10 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಭಾರತದ ಮಾಜಿ ನಾಯಕ ಈ ಬಗ್ಗೆ ಪ್ರತಿಕ್ರಿಯಿಸಲು ಲಭ್ಯವಾಗಿಲ್ಲ.
ಇತ್ತೀಚೆಗೆ, ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸೌರವ್ ತನ್ನ ಸುತ್ತಲಿನ ಜೀವನವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡಿದ್ದು, ಜನರನ್ನು ಇದು ಹೆಚ್ಚು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದರು. ನನ್ನ ಸಹೋದರ ಪ್ರತಿದಿನ ನಮ್ಮ ಕಾರ್ಖಾನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಅವರು ಹೆಚ್ಚು ಅಪಾಯದಲ್ಲಿದ್ದಾರೆ ಎಂದು ಸೌರವ್ ಗಂಗೂಲಿ ಹೇಳಿದ್ದರು.








