ನವದೆಹಲಿ: ಲೋಕಸಭೆ ಹಾಗೂ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಅನುಭವಿಸುತ್ತಿರುವ ಸಾಲು ಸಾಲು ಸೋಲುಗಳು ಇದೀಗ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿವೆ. ಶತಮಾನದ ಇತಿಹಾಸವಿರುವ ಪಕ್ಷವನ್ನು ಉಳಿಸಿಕೊಳ್ಳಬೇಕಾದರೆ ಈಗಿರುವ ನಾಯಕತ್ವವನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ಸಮರ್ಥರಿಗೆ ರಾಷ್ಟ್ರೀಯ ನಾಯಕತ್ವದ ಚುಕ್ಕಾಣಿ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿದೆ.
ಒಡಿಶಾದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಮೊಹಮ್ಮದ್ ಮೊಕಿಮ್ ಅವರು ಈ ಸಂಬಂಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಐದು ಪುಟಗಳ ಸುದೀರ್ಘ ಪತ್ರವು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಸ್ತುತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಪಕ್ಷಕ್ಕೆ ತಕ್ಷಣವೇ ಮೇಜರ್ ಸರ್ಜರಿ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.
ಡಿಕೆಶಿ ಪ್ರಿಯಾಂಕಾ ಹಾಗೂ ಪೈಲಟ್‌ಗೆ ಮಣೆ ಹಾಕಲು ಒತ್ತಾಯ
ಪಕ್ಷದ ಭವಿಷ್ಯದ ದೃಷ್ಟಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಸಮರ್ಥ ನಾಯಕರ ಅಗತ್ಯವಿದೆ ಎಂದು ಮೊಕಿಮ್ ಪ್ರತಿಪಾದಿಸಿದ್ದಾರೆ. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ರಾಜಕಾರಣದಲ್ಲಿ ಸಕ್ರಿಯವಾಗಿ ಮುಂಚೂಣಿಗೆ ಬರಬೇಕು. ಅವರೊಂದಿಗೆ ಸಂಘಟನಾ ಚತುರರೆಂದೇ ಖ್ಯಾತರಾಗಿರುವ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜಸ್ಥಾನದ ಪ್ರಬಲ ನಾಯಕ ಸಚಿನ್ ಪೈಲಟ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ವಿದ್ವಾಂಸ ಸಂಸದ ಶಶಿ ತರೂರ್ ಅವರಂತಹ ನಾಯಕರಿಗೆ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಮಾನ ನೀಡಿ ನಾಯಕತ್ವ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಕೇಳಿಬರುತ್ತಿರುವ ಸಂದರ್ಭದಲ್ಲೇ, ಅವರ ಹೆಸರು ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಥವಾ ಪ್ರಮುಖ ರಾಷ್ಟ್ರೀಯ ಹುದ್ದೆಗೆ ಕೇಳಿಬಂದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆಯೂ ಪತ್ರದಲ್ಲಿ ನೇರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಖರ್ಗೆ ಅವರಿಗೆ ಈಗಾಗಲೇ 83 ವರ್ಷ ವಯಸ್ಸಾಗಿದೆ. ಪ್ರಸ್ತುತ ಭಾರತದಲ್ಲಿ ಶೇ.65ರಷ್ಟು ಜನಸಂಖ್ಯೆ 35 ವರ್ಷಕ್ಕಿಂತ ಕೆಳಗಿನ ಯುವಕರದ್ದಾಗಿದೆ. ಈ ಯುವ ಸಮೂಹದ ಧ್ವನಿಯಾಗಲು ಅಥವಾ ಅವರ ಆಶಯಗಳಿಗೆ ಸ್ಪಂದಿಸಲು ಹಿರಿಯರಾದ ಖರ್ಗೆ ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯುವಕರನ್ನು ಸೆಳೆಯಬಲ್ಲ ಮತ್ತು ಹುರಿದುಂಬಿಸಬಲ್ಲ ತರುಣ ನಾಯಕರಿಗೆ ಪಕ್ಷದ ಅಧ್ಯಕ್ಷ ಪಟ್ಟ ಕಟ್ಟಬೇಕು ಎಂದು ಮೊಕಿಮ್ ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಕಾರ್ಯವೈಖರಿಯ ಬಗ್ಗೆಯೂ ತೀವ್ರ ಅಸಮಾಧಾನ ಹೊರಹಾಕಿರುವ ಮೊಕಿಮ್, ಕಳೆದ ಮೂರು ವರ್ಷಗಳಿಂದ ನಾನು ರಾಹುಲ್ ಗಾಂಧಿಯವರ ಭೇಟಿಗೆ ಪ್ರಯತ್ನಿಸುತ್ತಿದ್ದರೂ ಒಂದೇ ಒಂದು ಅವಕಾಶ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಒಬ್ಬ ಮಾಜಿ ಶಾಸಕನ ನೋವಲ್ಲ, ಬದಲಾಗಿ ದೇಶಾದ್ಯಂತ ಇರುವ ಲಕ್ಷಾಂತರ ಕಾರ್ಯಕರ್ತರು ಹೈಕಮಾಂಡ್‌ನಿಂದ ಅನುಭವಿಸುತ್ತಿರುವ ಸಂಪರ್ಕ ಕಡಿತದ (Disconnect) ಸಂಕೇತವಾಗಿದೆ. ನಾಯಕರು ಕಾರ್ಯಕರ್ತರಿಗೆ ಸಿಗದಿರುವುದೇ ಪಕ್ಷದ ಸಂಘಟನಾತ್ಮಕ ವೈಫಲ್ಯಕ್ಕೆ ಮುಖ್ಯ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.
ಪಕ್ಷಕ್ಕೆ ಓಪನ್ ಹಾರ್ಟ್ ಸರ್ಜರಿ ಅಗತ್ಯ
ಕಾಂಗ್ರೆಸ್ ಪಕ್ಷಕ್ಕೆ ಈಗ ಕೇವಲ ಸಣ್ಣಪುಟ್ಟ ಬದಲಾವಣೆಗಳ ಅಗತ್ಯವಿಲ್ಲ, ಬದಲಾಗಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ (ಓಪನ್ ಹಾರ್ಟ್ ಸರ್ಜರಿ) ಮಾದರಿಯ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ. ದೆಹಲಿ, ಹರಿಯಾಣ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಸೋಲುಗಳು ಕೇವಲ ಚುನಾವಣಾ ಹಿನ್ನಡೆಗಳಲ್ಲ. ಅವು ತಪ್ಪು ನಾಯಕತ್ವದ ಆಯ್ಕೆ, ಸರಣಿ ತಪ್ಪು ನಿರ್ಧಾರಗಳು ಮತ್ತು ಅಸಮರ್ಥರ ಕೈಗೆ ಜವಾಬ್ದಾರಿ ನೀಡಿದ್ದರ ಪರಿಣಾಮವಾಗಿದೆ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಇತಿಹಾಸದ ಪುಟಗಳಿಂದ ಕಾಂಗ್ರೆಸ್ ಮರೆಯಾಗುವ ಅಪಾಯವಿದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಕರ್ನಾಟಕದ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ರಾಷ್ಟ್ರೀಯ ಮಟ್ಟದ ನಾಯಕತ್ವಕ್ಕೆ ಪ್ರಸ್ತಾಪಿಸಿರುವುದು ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದ್ದು, ಹೈಕಮಾಂಡ್ ಈ ಪತ್ರಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.







