ಹೈದರಾಬಾದ್: ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾರರಿಗೆ ಕದ್ದುಮುಚ್ಚಿ ಹಣ, ಮದ್ಯ ಹಾಗೂ ಉಡುಗೊರೆ ಹಂಚುವುದು ಗುಟ್ಟಾಗೇನೂ ಉಳಿದಿಲ್ಲ. ಚುನಾವಣೆ ಮುಗಿದ ನಂತರ ಸೋತ ಅಭ್ಯರ್ಥಿಗಳು ತಾವು ಮಾಡಿದ್ದ ಖರ್ಚನ್ನು ನೆನೆದು ಮರುಗುವುದೂ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಾಶಯ ಸೋತ ಕೂಡಲೇ ತಾವು ಜನರಿಗೆ ಹಂಚಿದ್ದ ಹಣವನ್ನು ವಾಪಸ್ ಕೊಡುವಂತೆ ಮನೆಮನೆಗೆ ತೆರಳಿ ದಾಂಧಲೆ ನಡೆಸಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ನರಕಟ್ಪಲ್ಲಿ ಮಂಡಲದ ಔರ್ವಾನಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ಪ್ರಸಂಗ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬೆಂಬಲಿತ ಅಭ್ಯರ್ಥಿಯಾಗಿ ಕಲ್ಲೂರಿ ಬಾಲರಾಜು ಕಣಕ್ಕಿಳಿದಿದ್ದರು. ಗೆಲುವೇ ಗುರಿಯಾಗಿಸಿಕೊಂಡಿದ್ದ ಬಾಲರಾಜು, ಮತದಾನಕ್ಕೂ ಮುನ್ನಾ ದಿನಗಳಲ್ಲಿ ಮತದಾರರಿಗೆ ಭಾರೀ ಮೊತ್ತದ ಹಣವನ್ನು ಹಂಚಿದ್ದರು ಎಂದು ವರದಿಯಾಗಿದೆ.
ಆದರೆ, ಮತಪೆಟ್ಟಿಗೆ ತೆರೆದಾಗ ಫಲಿತಾಂಶ ಬಾಲರಾಜು ಅವರ ನಿರೀಕ್ಷೆಯನ್ನು ತಲೆಕೆಳಗಾಗಿಸಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಕ್ಕಲ ಪರಮೇಶ್ ಅವರು ಬರೋಬ್ಬರಿ 450 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ತಾನು ಹಣ ಹಂಚಿದ್ದರೂ ಜನರು ತನಗೆ ಮತ ಹಾಕಿಲ್ಲ ಎಂಬ ಸತ್ಯ ಬಾಲರಾಜು ಅವರನ್ನು ಕೆರಳಿಸಿತ್ತು.
ದೇವರ ಫೋಟೋ ಹಿಡಿದು ವಸೂಲಿ!
ಹೀನಾಯ ಸೋಲಿನಿಂದ ಕಂಗಾಲಾದ ಬಾಲರಾಜು, ತಮ್ಮ ಹಣ ಹೋಯಿತಲ್ಲಾ ಎಂಬ ಹತಾಶೆಯಲ್ಲಿ ವಿಚಿತ್ರ ನಿರ್ಧಾರಕ್ಕೆ ಬಂದರು. ಕೈಯಲ್ಲಿ ದೇವರ ಫೋಟೋವೊಂದನ್ನು ಹಿಡಿದುಕೊಂಡು ಗ್ರಾಮದ ಮನೆಮನೆಗೆ ತೆರಳಲಾರಂಭಿಸಿದರು. ಮತದಾರರ ಮನೆ ಬಾಗಿಲಿಗೆ ಹೋಗಿ, ದೇವರ ಫೋಟೋವನ್ನು ಮುಂದಿಟ್ಟು, ನೀವು ನನಗೆ ಮತ ಹಾಕಿದ್ದರೆ ಈ ಫೋಟೋ ಮೇಲೆ ಪ್ರಮಾಣ ಮಾಡಿ ಹೇಳಿ. ಒಂದು ವೇಳೆ ನೀವು ನನಗೆ ಮತ ಹಾಕಿಲ್ಲ ಎಂದಾದರೆ, ನಾನು ನಿಮಗೆ ನೀಡಿದ ಹಣವನ್ನು ಮರ್ಯಾದೆಯಿಂದ ಹಿಂತಿರುಗಿಸಿ ಎಂದು ಪಟ್ಟು ಹಿಡಿದರು.
ಅಭ್ಯರ್ಥಿಯ ಈ ವರ್ತನೆಯಿಂದ ಗಾಬರಿಯಾದ ಗ್ರಾಮಸ್ಥರು ಮುಜುಗರಕ್ಕೆ ಒಳಗಾದರು. ದೇವರ ಮೇಲಿನ ಭಯವೋ ಅಥವಾ ಅಭ್ಯರ್ಥಿಯ ಕಾಟವೋ, ಒಟ್ಟಿನಲ್ಲಿ ಹಲವು ಮತದಾರರು ತಾವು ಪಡೆದಿದ್ದ ಹಣವನ್ನು ಬಾಲರಾಜು ಅವರಿಗೆ ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಸೋತ ಅಭ್ಯರ್ಥಿ ತಾನು ಹಂಚಿದ್ದ ಹಣದಲ್ಲಿ ಒಂದಷ್ಟು ಭಾಗವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ನಿಯ ಸಮರ್ಥನೆ
ಈ ವಿಚಿತ್ರ ಘಟನೆಯ ಬಗ್ಗೆ ಬಾಲರಾಜು ಅವರ ಪತ್ನಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಪತಿಯ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಸೋಲಿನ ಅಂತರ ಕೇವಲ 50 ಅಥವಾ 60 ಮತಗಳಾಗಿದ್ದರೆ ನಾವು ಹಣವನ್ನು ವಾಪಸ್ ಕೇಳಲು ಹೋಗುತ್ತಿರಲಿಲ್ಲ. ಸೋಲು ಸಹಜ ಎಂದು ಸುಮ್ಮನಿರುತ್ತಿದ್ದೆವು. ಆದರೆ ಬರೋಬ್ಬರಿ 450 ಮತಗಳ ಅಂತರದಿಂದ ಸೋತಿದ್ದೇವೆ ಎಂದರೆ, ಹಣ ಪಡೆದ ಬಹುತೇಕರು ನಮಗೆ ಮತ ಹಾಕಿಲ್ಲ ಎಂದರ್ಥ. ಹಣವನ್ನೂ ಪಡೆದು, ಮತವನ್ನೂ ಹಾಕದೆ ಮೋಸ ಮಾಡಿದವರಿಂದ ಹಣ ವಾಪಸ್ ಕೇಳುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸದ್ಯ ಈ ಘಟನೆ ತೆಲಂಗಾಣ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಗೆ ತರಹೇವಾರಿ ಕಮೆಂಟ್‌ಗಳು ಬರುತ್ತಿವೆ.







