ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕದಂಬ ನೌಕಾನೆಲೆ ಸಮೀಪ ವಲಸಿಗ ಸೀಗಲ್ ಹಕ್ಕಿಯೊಂದರಲ್ಲಿ ವಿದೇಶಿ GPS ಟ್ರ್ಯಾಕರ್ ಪತ್ತೆಯಾಗಿದ್ದು ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ. ನಿನ್ನೆ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಸೀಗಲ್ ಹಕ್ಕಿಯನ್ನು ಗಮನಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಅದರ ದೇಹಕ್ಕೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿರುವುದು ಬೆಳಕಿಗೆ ಬಂದಿದೆ.
ಪತ್ತೆಯಾದ ಟ್ರ್ಯಾಕರ್‌ನಲ್ಲಿ ಇಕೋ ಎನ್ವಿರಾನ್ಮಂಟ್ ಎಂಬ ಮಾಹಿತಿ ನಮೂದಿಸಲಾಗಿದ್ದು, ಇದು ಚೀನಾದ ಮೂಲದ ಟ್ರ್ಯಾಕರ್ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕಾರವಾರ ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ತಕ್ಷಣ ತನಿಖೆ ಆರಂಭಿಸಿವೆ.
ಸಾಮಾನ್ಯವಾಗಿ ವಲಸಿಗ ಪಕ್ಷಿಗಳ ಚಲನವಲನ ಅಧ್ಯಯನಕ್ಕಾಗಿ ಸಂಶೋಧನಾ ಉದ್ದೇಶದಿಂದ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾಗುತ್ತದೆ. ಆದರೆ, ನೌಕಾನೆಲೆ ಸೇರಿದಂತೆ ರಕ್ಷಣಾ ದೃಷ್ಟಿಯಿಂದ ಅತಿ ಮಹತ್ವದ ಪ್ರದೇಶದಲ್ಲಿ ಇಂತಹ ಟ್ರ್ಯಾಕರ್ ಹೊಂದಿದ ಪಕ್ಷಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಟ್ರ್ಯಾಕರ್ ನಿಜಕ್ಕೂ ಪರಿಸರ ಅಧ್ಯಯನಕ್ಕೆ ಸಂಬಂಧಪಟ್ಟದ್ದೇನಾ ಅಥವಾ ಬೇರೆ ಉದ್ದೇಶ ಹೊಂದಿದೆಯೇ ಎಂಬುದನ್ನು ತಿಳಿಯಲು ತಾಂತ್ರಿಕ ತಜ್ಞರಿಂದ ಪರಿಶೀಲನೆ ನಡೆಯುತ್ತಿದೆ. ಅಲ್ಲದೆ, ಈ ಪಕ್ಷಿ ಯಾವ ದೇಶದಿಂದ ವಲಸೆ ಬಂದು, ಯಾವ ಮಾರ್ಗದಲ್ಲಿ ಸಂಚರಿಸಿದೆ ಎಂಬ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.
ಭದ್ರತಾ ದೃಷ್ಟಿಯಿಂದ ಯಾವುದೇ ಲೋಪ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ತನಿಖೆ ಪೂರ್ಣಗೊಂಡ ನಂತರ ಸ್ಪಷ್ಟ ಮಾಹಿತಿ ಹೊರಬೀಳಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.







