ಬೆಳಗಾವಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ. ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್‌ಗಳಿಗೆ ಆಯುಷ್ಯವಿಲ್ಲ ಎಂಬುದಕ್ಕೆ ನ್ಯಾಯಾಲಯದ ಆದೇಶವೇ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಧರಣಿಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣ, ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆ ಮತ್ತು ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಷನಲ್ ಹೆರಾಲ್ಡ್ ದೇಶದ ಆಸ್ತಿ, ದ್ವೇಷ ಬಿಜೆಪಿಯ ಆಸ್ತಿ
ನ್ಯಾಷನಲ್ ಹೆರಾಲ್ಡ್ ಈ ದೇಶದ ಆಸ್ತಿಯೇ ಹೊರತು ವೈಯಕ್ತಿಕ ಆಸ್ತಿಯಲ್ಲ. ಆದರೆ ದ್ವೇಷ ರಾಜಕಾರಣ ಮಾಡುವುದೇ ಬಿಜೆಪಿಯ ಆಸ್ತಿಯಾಗಿದೆ. ಬಿಜೆಪಿ ಎಂದರೆ ಬುರುಡೆ ಜನತಾ ಪಕ್ಷವಾಗಿದೆ. ಎಷ್ಟೇ ಪಿತೂರಿ ಮಾಡಿದರೂ ಅಂತಿಮವಾಗಿ ನ್ಯಾಯ ನಮಗೆ ಸಿಕ್ಕಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಕಳುಹಿಸಲು ದೊಡ್ಡ ಮಟ್ಟದ ಪಿತೂರಿ ನಡೆಸಲಾಗಿತ್ತು. ಆದರೆ ಸತ್ಯ ಮೇವ ಜಯತೆ, ಬಿಜೆಪಿಗಿಲ್ಲ ಘನತೆ ಎಂಬುದು ಸಾಬೀತಾಗಿದೆ ಎಂದು ಡಿಕೆಶಿ ಲೇವಡಿ ಮಾಡಿದರು.
ನೆಹರು ಸ್ಥಾಪಿಸಿದ ಸಂಸ್ಥೆ ಕಾಂಗ್ರೆಸ್ ಸ್ವತ್ತು
ಇತಿಹಾಸವನ್ನು ಉಲ್ಲೇಖಿಸಿದ ಡಿಕೆ ಶಿವಕುಮಾರ್, 1937ರಲ್ಲಿ ಜವಹಾರ್ ಲಾಲ್ ನೆಹರು ಅವರು ಜನರ ಧ್ವನಿಯಾಗಲು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಿದರು. ಈ ಸಂಸ್ಥೆ ಮಹಾತ್ಮಾ ಗಾಂಧಿ ಅಥವಾ ನೆಹರು ಅವರ ವೈಯಕ್ತಿಕ ಆಸ್ತಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಪಕ್ಷದ ಅಧ್ಯಕ್ಷರಾದವರು ಈ ಸಂಸ್ಥೆಯ ಪದನಿಮಿತ್ತ ಷೇರುದಾರರಾಗುತ್ತಾರೆ ಮತ್ತು ಜವಾಬ್ದಾರಿ ಹೊರುತ್ತಾರೆ. ಆದರೆ, ಬಿಜೆಪಿ ನಾಯಕರು ಇದನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವೈಯಕ್ತಿಕ ಆಸ್ತಿ ಎಂದು ಬಿಂಬಿಸಿ, ಸುಳ್ಳು ದೂರು ನೀಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಅಧಿಕಾರ ಶಾಶ್ವತವಲ್ಲ, ಟ್ರಸ್ಟ್ ಆಸ್ತಿ ನಮ್ಮದಲ್ಲ
ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಉದಾಹರಣೆ ನೀಡಿದ ಅವರು, ಕಾಂಗ್ರೆಸ್ ಭವನ ಟ್ರಸ್ಟ್ ಬೆಂಗಳೂರಿನಲ್ಲಿದೆ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಯಾಗಿದ್ದರು, ಈಗ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅಧ್ಯಕ್ಷನಾಗಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ಸಿಎಲ್‌ಪಿ ನಾಯಕರಾಗಿ ಟ್ರಸ್ಟಿಯಾಗಿದ್ದಾರೆ. ಹಾಗಂದ ಮಾತ್ರಕ್ಕೆ ನೂರಾರು ಕಟ್ಟಡಗಳಿರುವ ಈ ಟ್ರಸ್ಟ್ ಆಸ್ತಿ ನಮ್ಮದಾಗುತ್ತದೆಯೇ? ನಾನು ಅಧ್ಯಕ್ಷ ಸ್ಥಾನದಿಂದ ಇಳಿದ ಮೇಲೆ ಬರುವವರು ಇದರ ಜವಾಬ್ದಾರಿ ಹೊರುತ್ತಾರೆ. ಇದೇ ನಿಯಮ ನ್ಯಾಷನಲ್ ಹೆರಾಲ್ಡ್‌ಗೂ ಅನ್ವಯಿಸುತ್ತದೆ. ಆದರೆ ಬಿಜೆಪಿಯವರು 2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಗಾಂಧಿ ಕುಟುಂಬದವರು ತಮ್ಮದಾಗಿಸಿಕೊಂಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ದೇಣಿಗೆ ನೀಡುವುದು ಅಪರಾಧವೇ?
ಇದೇ ಪ್ರಕರಣದಲ್ಲಿ ಇ.ಡಿ ಸಂಸ್ಥೆ ನನಗೂ, ನನ್ನ ಸಹೋದರನಿಗೂ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೂ ನೋಟಿಸ್ ನೀಡಿತ್ತು. ನಾನು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನನ್ನಿಷ್ಟದಂತೆ ಪಕ್ಷಕ್ಕೆ ಅಥವಾ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ದೇಣಿಗೆ ನೀಡಿದ್ದೇನೆ. ನಮ್ಮ ಶಾಸಕರೂ ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದ್ದಕ್ಕೆ ಲೆಕ್ಕ ಕೇಳುವುದು ಮತ್ತು ನೋಟಿಸ್ ನೀಡುವುದು ಯಾವ ನ್ಯಾಯ? ಇ.ಡಿ ನನ್ನ ವಿರುದ್ಧ ಪಿಎಂಎಲ್‌ಎ ಪ್ರಕರಣ ದಾಖಲಿಸಿತ್ತು, ಆದರೆ ಸುಪ್ರೀಂ ಕೋರ್ಟ್ ಅದನ್ನು ವಜಾ ಮಾಡಿದೆ. ಅದೇ ರೀತಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಮೇಲಿನ ಸುಳ್ಳು ಕೇಸ್ ಕೂಡ ನಿಲ್ಲುವುದಿಲ್ಲ ಎಂದು ಹೇಳಿದರು.
ಇ.ಡಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ
ತನಿಖಾ ಸಂಸ್ಥೆಗಳ ವಿರುದ್ಧ ಕಿಡಿಕಾರಿದ ಡಿಕೆಶಿ, ರಾಜಕೀಯ ಪ್ರೇರಿತ ಪ್ರಕರಣಗಳನ್ನು ನ್ಯಾಯಾಲಯ ಪರಿಗಣಿಸದೇ ಇರುವುದು ಬಿಜೆಪಿ ಮತ್ತು ಇ.ಡಿಗೆ ನೀಡಿರುವ ಎಚ್ಚರಿಕೆ ಗಂಟೆಯಾಗಿದೆ. ಇ.ಡಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಕೇವಲ ವಿರೋಧ ಪಕ್ಷದ ನಾಯಕರ ಮೇಲೆ ಮುಗಿಬೀಳುವ ತನಿಖಾ ಸಂಸ್ಥೆಗಳು, ಆಡಳಿತರೂಢ ಬಿಜೆಪಿ ನಾಯಕರ ವಿರುದ್ಧ ಏಕೆ ಪ್ರಕರಣ ದಾಖಲಿಸುತ್ತಿಲ್ಲ? ಅಂತಿಮವಾಗಿ ಸತ್ಯ ಗೆದ್ದಿದೆ, ನ್ಯಾಯಾಲಯದ ತೀರ್ಪಿನಿಂದ ನನಗೆ ಸಂತೋಷವಾಗಿದೆ ಎಂದು ತಿಳಿಸಿದರು.
ಈ ಪ್ರತಿಭಟನೆ ಕೇವಲ ಬೆಳಗಾವಿಗೆ ಸೀಮಿತವಾಗಿಲ್ಲ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಮುಂದುವರಿಯಲಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಕೈ ಬಲಪಡಿಸಲು ಕಾಂಗ್ರೆಸ್ ಸದಾ ಸಿದ್ಧವಿದೆ ಎಂದು ಕರೆ ನೀಡಿದರು.








