ಕಾರವಾರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕುರಿತು ನಡೆಯುತ್ತಿದ್ದ ಗುಸುಗುಸು ಚರ್ಚೆಗಳಿಗೆ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೊಸ ತಿರುವು ನೀಡಿದ್ದಾರೆ. ಎರಡುವರೆ ವರ್ಷಗಳ ಕಾಲ ಸಿದ್ದರಾಮಯ್ಯನವರು ಅಧಿಕಾರ ನಡೆಸಲಿದ್ದಾರೆ ಎಂಬ ಒಪ್ಪಂದದ ವಿಚಾರ ನಿಜ ಎಂದು ಒಪ್ಪಿಕೊಂಡಿರುವ ಡಿಕೆಶಿ, ಮುಂದಿನ ಬೆಳವಣಿಗೆಗಳ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ತಳ್ಳಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆಯ ಜಗದೀಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದ ಆಂತರಿಕ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡರು.
ಎರಡುವರೆ ವರ್ಷದ ಒಪ್ಪಂದ ಮತ್ತು ಹೈಕಮಾಂಡ್ ಸಂದೇಶ
ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತಂತೆ ಮಾತನಾಡಿದ ಡಿಕೆಶಿ, ಸರ್ಕಾರ ರಚನೆಯಾದ ಆರಂಭದಲ್ಲಿ ಎರಡುವರೆ ವರ್ಷಗಳ ಕಾಲ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಹೈಕಮಾಂಡ್ ಸಮ್ಮುಖದಲ್ಲಿ ಒಪ್ಪಂದ ಆಗಿರುವುದು ಸತ್ಯ. ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಆದರೆ, ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎಂದು ತಾವೆಂದೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಅಂದು ಹೈಕಮಾಂಡ್ ನಾಯಕರ ಸೂಚನೆಯಂತೆ ಇಬ್ಬರೂ ಪರಸ್ಪರ ಮಾತುಕತೆ ನಡೆಸಿ ಒಗ್ಗಟ್ಟಿನಿಂದ ಸರ್ಕಾರ ರಚನೆ ಮಾಡಿದ್ದೆವು, ಈಗಲೂ ಅದೇ ಒಗ್ಗಟ್ಟಿನಿಂದ ಸರ್ಕಾರ ಮುನ್ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಪಕ್ಷದ ನಿರ್ಧಾರವೇ ಅಂತಿಮ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಹೈಕಮಾಂಡ್ ನಾಯಕರ ಒಲವು ಕಾರಣವಾಗಿತ್ತು. ಈಗಲೂ ಸಹ ಹೈಕಮಾಂಡ್ ನಿರ್ಧಾರದಂತೆಯೇ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ತಾವು ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ವರಿಷ್ಠರ ನಿರ್ಧಾರಕ್ಕೆ ತಲೆಬಾಗಿ, ಅವರು ನೀಡುವ ಯಾವುದೇ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸುವುದಾಗಿ ಶಿವಕುಮಾರ್ ಸ್ಪಷ್ಟಪಡಿಸಿದರು. ಈ ಮೂಲಕ ಮುಂದಿನ ದಿನಗಳಲ್ಲಿ ಸಿಎಂ ಬದಲಾವಣೆಯಾಗಲಿದೆಯೇ ಅಥವಾ ಇಲ್ಲವೇ ಎಂಬ ನಿರ್ಧಾರ ದೆಹಲಿ ನಾಯಕರ ಕೈಯಲ್ಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.
ಆಂದ್ಲೆಯ ಜಗದೀಶ್ವರಿ ದೇವಿಯ ದರ್ಶನ ಪಡೆದ ಬಳಿಕ ಮಾತನಾಡಿದ ಡಿಕೆಶಿ, ತಮ್ಮ ಭೇಟಿಯ ಹಿಂದೆ ಧಾರ್ಮಿಕ ಮತ್ತು ರಾಜಕೀಯ ಅರ್ಥಗಳನ್ನು ಹೊಮ್ಮಿಸಿದರು. ಈ ಹಿಂದೆ ಇದೇ ದೇವಿಯ ಸನ್ನಿಧಾನಕ್ಕೆ ಬಂದು ಪ್ರಾರ್ಥಿಸಿದಾಗ ತಮ್ಮ ಇಷ್ಟಾರ್ಥಗಳು ಈಡೇರಿ ಶುಭವಾಗಿತ್ತು. ದೇವಿಯ ಇಚ್ಛೆಯಂತೆ ಮತ್ತೊಮ್ಮೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿದೆ. ಮುಂದೆಯೂ ಕೂಡ ಶುಭವಾಗುವ ಬಲವಾದ ಸೂಚನೆಗಳು ದೊರೆತಿವೆ ಎಂದು ಮಾರ್ಮಿಕವಾಗಿ ನುಡಿದರು.
ದೇವರ ಮುಂದೆ ಏನು ಬೇಡಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಕ್ತ ಮತ್ತು ದೇವರ ನಡುವಿನ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾ ಅರ್ಥಪೂರ್ಣ ಮಂದಹಾಸ ಬೀರಿದರು. ಡಿಕೆಶಿ ಅವರ ಈ ಮಾತುಗಳು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆಯೇ ಎಂಬ ಚರ್ಚೆಗೆ ಗ್ರಾಸವಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.








