ಗ್ರಾಮೀಣ ಬಡವರ ಜೀವನಾಡಿಯಂತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (MGNREGA) ನಿಲ್ಲಿಸಲು ಅಥವಾ ದುರ್ಬಲಗೊಳಿಸಲು ಮುಂದಾದರೆ ಜನ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಉಗ್ರ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಸ್ವರೂಪವನ್ನು ಬದಲಿಸಲು ಮತ್ತು ಅದರ ಹೆಸರನ್ನು ಬದಲಾಯಿಸಿ ‘ಜಿ ರಾಮ್ ಜಿ’ ಬಿಲ್ ಪಾಸ್ ಮಾಡಲು ಮುಂದಾಗಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಡವರ ಹೊಟ್ಟೆಯ ಮೇಲೆ ಹೊಡೆಯುವಂತಹ ಇಂತಹ ನಿರ್ಧಾರಗಳನ್ನು ಕೈಗೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವರು ಗುಡುಗಿದ್ದಾರೆ.
ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ
ನರೇಗಾ ಯೋಜನೆಯು ಹಳ್ಳಿಗಳ ಬಡಜನರಿಗಾಗಿ ರೂಪಿಸಿದ ಸಂಜೀವಿನಿ. ಇಂತಹ ಜನಪ್ರಿಯ ಮತ್ತು ಅಗತ್ಯ ಯೋಜನೆಯನ್ನು ಬದಲಿಸುವುದು ಅಥವಾ ನಿಲ್ಲಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಹಳೆಯ ಜನಪರ ಯೋಜನೆಗಳನ್ನು ಬದಲಿಸಲು ನೀವು ಕೆಲಸ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ಈ ಯೋಜನೆಯನ್ನು ನಿಲ್ಲಿಸಿದರೆ ಅಥವಾ ಬಡವರಿಗೆ ಅನ್ಯಾಯ ಮಾಡಿದರೆ, ರೊಚ್ಚಿಗೆದ್ದ ಜನರು ನಿಮ್ಮ ಪಕ್ಷದ ನಾಯಕರನ್ನು ರಸ್ತೆಯಲ್ಲಿ ಓಡಾಡಲು ಕೂಡ ಬಿಡುವುದಿಲ್ಲ ಎಂದು ಖರ್ಗೆ ನೇರವಾಗಿಯೇ ಎಚ್ಚರಿಸಿದ್ದಾರೆ.
ಉದ್ಯೋಗದ ಹಕ್ಕು ಕಸಿದುಕೊಳ್ಳುವ ಹುನ್ನಾರ
ಹೊಸದಾಗಿ ತರಲು ಉದ್ದೇಶಿಸಿರುವ ಬಿಲ್ ನಲ್ಲಿ ಪ್ರಮುಖವಾಗಿ ರೈಟ್ ಟು ವರ್ಕ್ ಅಥವಾ ಉದ್ಯೋಗದ ಹಕ್ಕು ಎಂಬ ಅಂಶವನ್ನೇ ಕೈಬಿಡಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸಂವಿಧಾನಬದ್ಧವಾಗಿ ಜನರಿಗೆ ಕೆಲಸ ಕೇಳುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದ ಈ ಯೋಜನೆಯ ಮೂಲ ಆಶಯವನ್ನೇ ಗಾಳಿಗೆ ತೂರಲಾಗುತ್ತಿದೆ. ಇದು ಸರಿಯಲ್ಲ ಎಂದು ಖರ್ಗೆ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಯೋಜನೆಯ ಇತಿಹಾಸವನ್ನು ಸ್ಮರಿಸಿದ ಖರ್ಗೆ, ಈ ಹಿಂದೆ ಡಾ. ಮನ್ಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಬಡವರ ಹಸಿವು ನೀಗಿಸಲು ಈ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದರು. ಆದರೆ ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಅನಿವಾರ್ಯವಾಗಿ ಒಪ್ಪಿಕೊಂಡರು. ಇದೀಗ ಮತ್ತೆ ಅದರ ಹೆಸರು ಮತ್ತು ಸ್ವರೂಪ ಬದಲಾಯಿಸಲು ಹೊರಟಿದ್ದಾರೆ. ಇದರ ಹಿಂದಿನ ನಿಮ್ಮ ನೈಜ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಜನರನ್ನು ಗುಲಾಮಗಿರಿಗೆ ತಳ್ಳುವ ಯತ್ನವೇ?
ಕೇಂದ್ರ ಸರ್ಕಾರದ ಈ ನಡೆಗಳನ್ನು ಗಮನಿಸಿದರೆ ಹಲವು ಅನುಮಾನಗಳು ಮೂಡುತ್ತವೆ. ಉದ್ಯೋಗದ ಹಕ್ಕನ್ನು ಕಸಿದುಕೊಂಡು, ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ? ದೇಶದ ಬಡ ಜನರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದು ನಿಮ್ಮ ಉದ್ದೇಶವೇ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.








