ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟದ ಪ್ರಮಾಣದಲ್ಲಿ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಬರಿದಾಗುತ್ತಿರುವ ಬೊಕ್ಕಸವನ್ನು ತುಂಬಿಸಲು ಅಬಕಾರಿ ಇಲಾಖೆಯ ಮೂಲಕ ಬ್ರಹ್ಮಾಸ್ತ್ರವೊಂದನ್ನು ಪ್ರಯೋಗಿಸಲು ಮುಂದಾಗಿದೆ. ಸಂಪನ್ಮೂಲ ಕ್ರೋಢೀಕರಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಅಂದರೆ ಒಟ್ಟು 569 ಹೊಸ ಮದ್ಯದ ಅಂಗಡಿಗಳ ಪರವಾನಗಿ ಹರಾಜಿಗೆ ಮುಹೂರ್ತ ನಿಗದಿಪಡಿಸಿದೆ.
ಸಾವಿರ ಕೋಟಿ ಆದಾಯದ ಬೃಹತ್ ಟಾರ್ಗೆಟ್
ಅಬಕಾರಿ ಇಲಾಖೆಯು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ರಾಜ್ಯಾದ್ಯಂತ ಒಟ್ಟು 569 ಮದ್ಯದ ಸನ್ನದುಗಳನ್ನು (ಲೈಸೆನ್ಸ್) ಇ-ಹರಾಜು ಹಾಕಲಾಗುತ್ತಿದೆ. ಇದರಲ್ಲಿ 477 ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್ ಮಾದರಿಯ ವೈನ್ ಶಾಪ್‌ಗಳು) ಹಾಗೂ 92 ಬಾರ್ ಮತ್ತು ರೆಸ್ಟೋರೆಂಟ್ ಪರವಾನಗಿಗಳು ಸೇರಿವೆ. ಈ ಹರಾಜು ಪ್ರಕ್ರಿಯೆಯ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 1000 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದುಬರುವ ನಿರೀಕ್ಷೆಯನ್ನು ಇಲಾಖೆ ಹೊಂದಿದೆ.
ಮೀಸಲಾತಿ ಅನ್ವಯ ಹರಾಜು ಪ್ರಕ್ರಿಯೆ
ಹೊಸ ಮದ್ಯದಂಗಡಿಗಳ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟು ಲೈಸೆನ್ಸ್‌ಗಳಲ್ಲಿ ಪರಿಶಿಷ್ಟ ಜಾತಿಗೆ (ಎಸ್.ಸಿ) ಶೇ. 17 ಹಾಗೂ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಶೇ. 7 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಉಳಿದ ಸನ್ನದುಗಳನ್ನು ಸಾಮಾನ್ಯ ವರ್ಗದಡಿ ಹರಾಜು ಮಾಡಲಾಗುತ್ತದೆ.
ದಿನಾಂಕ ನಿಗದಿ ಮತ್ತು ಪ್ರಕ್ರಿಯೆ
ಮದ್ಯದಂಗಡಿಗಳ ಇ-ಹರಾಜಿಗೆ ಅಬಕಾರಿ ಇಲಾಖೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಡಿಸೆಂಬರ್ 22 ರಿಂದ: ಬಿಡ್ಡುದಾರರ ನೋಂದಣಿ ಪ್ರಕ್ರಿಯೆ ಆರಂಭ.
ಜನವರಿ 13 ರಿಂದ 20 ರವರೆಗೆ: ನೇರ ಹರಾಜು
ಪ್ರಕ್ರಿಯೆ (ಲೈವ್ ಬಿಡ್ಡಿಂಗ್) ನಡೆಯಲಿದೆ.
ಸರ್ಕಾರದ ಈ ನಡೆಗೆ ಮದ್ಯ ವ್ಯಾಪಾರಿಗಳ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ವ್ಯಾಪಾರದಲ್ಲಿ ಇಳಿಕೆಯಾಗಿದ್ದು, ಹೊಸ ಅಂಗಡಿಗಳು ಬಂದರೆ ಹಾಲಿ ಇರುವ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ವಾದಿಸುತ್ತಿದ್ದಾರೆ.
ಇನ್ನೊಂದೆಡೆ, ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಈ ನಡೆ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ, ಸಂಸಾರಗಳು ಬೀದಿಗೆ ಬೀಳುತ್ತಿವೆ. ಆದ್ದರಿಂದ ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದರು.
ಆದರೆ, ಮಹಿಳಾ ಆಯೋಗದ ಮನವಿ ಮತ್ತು ವ್ಯಾಪಾರಿಗಳ ವಿರೋಧವನ್ನು ಬದಿಗಿತ್ತಿರುವ ಸರ್ಕಾರ, ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಹೊಸ ಅಂಗಡಿಗಳ ಹರಾಜಿಗೆ ಹಸಿರು ನಿಶಾನೆ ತೋರಿದೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲೇ ರಾಜ್ಯದಲ್ಲಿ ಮದ್ಯದ ಹೊಳೆ ಹರಿಸಲು ಅಬಕಾರಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಂತಿದೆ.








