ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಹೆಸರು ಬದಲಾವಣೆ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ದುರ್ಬಳಕೆ ಖಂಡಿಸಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸತ್ಯಮೇವ ಜಯತೆ ಘೋಷವಾಕ್ಯದಡಿ ಶನಿವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದು, ನೇರ ಸವಾಲು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನೋಟು ಪ್ರದರ್ಶಿಸಿ ಕೇಂದ್ರಕ್ಕೆ ಡಿಕೆಶಿ ಬಹಿರಂಗ ಸವಾಲು
ಪ್ರತಿಭಟನಾ ಸಭೆಯಲ್ಲಿ ಅತ್ಯಂತ ಆಕ್ರಮೆಣಕಾರಿಯಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸರ್ಕಾರವು ಮಹಾತ್ಮ ಗಾಂಧೀಜಿಯವರ ಹೆಸರನ್ನು ಅಳಿಸಿಹಾಕಲು ಸಂಚು ರೂಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಜೇಬಿನಿಂದ ಐನೂರು ರೂಪಾಯಿ ಮುಖಬೆಲೆಯ ನೋಟನ್ನು ತೆಗೆದು ಪ್ರದರ್ಶಿಸಿದ ಡಿಕೆಶಿ, ಯುಪಿಎ ಸರ್ಕಾರವಿದ್ದಾಗ ಬಡವರ ಹಸಿವು ನೀಗಿಸಲು ನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಆ ಯೋಜನೆಯಿಂದ ಗಾಂಧಿ ಹೆಸರನ್ನು ತೆಗೆದುಹಾಕಲು ಮುಂದಾಗಿದೆ. ಯೋಜನೆಯಿಂದ ಗಾಂಧಿ ಹೆಸರನ್ನು ತೆಗೆಯುವ ನಿಮಗೆ, ತಾಕತ್ತಿದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆದುಹಾಕಿ ಎಂದು ಕೇಂದ್ರ ನಾಯಕರಿಗೆ ಬಹಿರಂಗ ಸವಾಲು ಎಸೆದರು.
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿಸಲು ಬಿಡೆವು
ದೇಶದ ಸ್ವಾತಂತ್ರ್ಯ ಹಾಗೂ ಐಕ್ಯತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಲು ನಾಥೂರಾಮ್ ಗೋಡ್ಸೆ ಆರಾಧಕರಿಂದ ಸಾಧ್ಯವಿಲ್ಲ ಎಂದು ಡಿಕೆಶಿ ಗುಡುಗಿದರು. ಬಿಜೆಪಿ ನಾಯಕರು ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಪರಿವರ್ತಿಸಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಇರುವವರೆಗೂ ಅವರ ಈ ಕನಸು ನನಸಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಬಡವರಿಗೆ ಅನ್ನ ನೀಡುವ ಯೋಜನೆಯಿಂದ ಮಹಾತ್ಮರ ಹೆಸರನ್ನು ತೆಗೆಯುವುದು ದೇಶದ್ರೋಹದ ಕೆಲಸ ಮತ್ತು ಗಾಂಧೀಜಿಯನ್ನು ಮತ್ತೊಮ್ಮೆ ಕೊಲ್ಲುವ ಪ್ರಯತ್ನ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಗಾಂಧಿ ಪ್ರತಿಮೆ ಮುಂದೆ ನಿಲ್ಲುವ ಹಕ್ಕು ನಿಮಗಿಲ್ಲ
ಗಾಂಧೀಜಿಯವರ ವಿಚಾರಧಾರೆಗಳಿಗೆ ಮತ್ತು ಹೆಸರಿಗೆ ಅಪಮಾನ ಮಾಡುತ್ತಿರುವ ಬಿಜೆಪಿ ನಾಯಕರು ಇನ್ನು ಮುಂದೆ ಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು. ಬಾಯಲ್ಲಿ ಗಾಂಧಿ ಹೆಸರು ಹೇಳುತ್ತಾ, ಕೃತ್ಯದಲ್ಲಿ ಗೋಡ್ಸೆ ಪ್ರವೃತ್ತಿ ತೋರುವ ಬಿಜೆಪಿ ನಾಯಕರು ಹಾಗೂ ಶಾಸಕರು ಇನ್ಮುಂದೆ ಗಾಂಧಿ ಪ್ರತಿಮೆ ಬಳಿ ಸುಳಿಯಬಾರದು ಎಂದು ತಾಕೀತು ಮಾಡಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಕಾಂಗ್ರೆಸ್ ಪಕ್ಷದ ಆಸ್ತಿಯೇ ಹೊರತು ವೈಯಕ್ತಿಕ ಆಸ್ತಿಯಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅದರ ಟ್ರಸ್ಟಿಯಾಗಿದ್ದೇನೆ, ಸೋನಿಯಾ ಗಾಂಧಿಯವರು ರಾಷ್ಟ್ರಮಟ್ಟದಲ್ಲಿ ಟ್ರಸ್ಟಿಯಾಗಿದ್ದಾರೆ. ಇದು ಪಕ್ಷದ ಸ್ವತ್ತಾಗಿದ್ದರೂ, ಕೇಂದ್ರ ಸರ್ಕಾರ ಇಡಿ ಸಂಸ್ಥೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನಮ್ಮ ನಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ. ಬಿಜೆಪಿಯವರ ಏಕೈಕ ಆಸ್ತಿ ಎಂದರೆ ಅದು ದ್ವೇಷದ ರಾಜಕಾರಣ ಎಂದು ಶಿವಕುಮಾರ್ ಆರೋಪಿಸಿದರು.
ವಿಚಾರಣೆಗೆ ಸಿದ್ಧ: ಸತ್ಯಕ್ಕೆ ಸಾವಿಲ್ಲ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೂ ನೋಟಿಸ್ ಬಂದಿದ್ದು, ನವೆಂಬರ್ 28ರಂದು ದೆಹಲಿಗೆ ತೆರಳಿ ವಿಚಾರಣೆ ಎದುರಿಸುತ್ತೇನೆ. ನಾನು, ನನ್ನ ಸಹೋದರ ಡಿ.ಕೆ. ಸುರೇಶ್ ಹಾಗೂ ಇತರರು ಕಾನೂನುಬದ್ಧವಾಗಿಯೇ ವ್ಯವಹಾರ ನಡೆಸಿದ್ದೇವೆ. ಎಷ್ಟೇ ಸಂಕಷ್ಟ ಬಂದರೂ ಎದುರಿಸಲು ಸಿದ್ಧವಿದ್ದೇವೆ. ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.








