ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕುರಿತ ಗೊಂದಲ ಹೊಸ ವರ್ಷಕ್ಕೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದಾಗಿ ಮತ್ತೆ ಕಾವು ಪಡೆದಿರುವ ಈ ವಿಚಾರ ಇದೀಗ ದೆಹಲಿಯತ್ತ ತಿರುಗಿದೆ. ಖರ್ಗೆ ಉರುಳಿಸಿರುವ ರಾಜಕೀಯ ಚೆಂಡನ್ನು ಸಿಎಂ ಸಿದ್ದರಾಮಯ್ಯ ನೇರವಾಗಿ ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದು, ಈ ಬಿಕ್ಕಟ್ಟಿನ ಬಗ್ಗೆ ರಾಹುಲ್ ಗಾಂಧಿಯವರೇ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ, ನಾಯಕತ್ವ ಬದಲಾವಣೆ ಸೇರಿದಂತೆ ಎಲ್ಲ ವಿಚಾರಗಳ ತೀರ್ಮಾನ ರಾಹುಲ್ ಗಾಂಧಿಯವರ ಕೈಯಲ್ಲಿದೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC) ಸಭೆಗೆ ತಾನು ಹಾಜರಾಗುವುದಿಲ್ಲ ಎಂದೂ ಘೋಷಿಸಿದ್ದಾರೆ. ಅದಕ್ಕೂ ಕಾರಣವಿದೆ ಎಂದು ಹೇಳಿದ ಸಿಎಂ, ಈ ವಿಚಾರವನ್ನು ದೆಹಲಿಯಲ್ಲಿ ಚರ್ಚಿಸುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.
ಇನ್ನೊಂದೆಡೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ತಮ್ಮ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಹೈಕಮಾಂಡ್ ನಾಯಕರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ. ಇತ್ತ ಬೆಂಗಳೂರಿನಲ್ಲಿ ಕುಳಿತಿರುವ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಶಾಸಕರು ಹಾಗೂ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ, ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಒಳಗಿನ ಸಿಎಂ ಕುರ್ಚಿ ಪೈಪೋಟಿ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ರಾಜಕೀಯ ಗೊಂದಲಕ್ಕೆ ಅಂತಿಮ ತೆರೆ ಎಳೆಯುವ ಹೊಣೆ ಇದೀಗ ಸಂಪೂರ್ಣವಾಗಿ ರಾಹುಲ್ ಗಾಂಧಿಯವರ ಮೇಲಿದೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡುವ ಸ್ಥಿತಿಯಲ್ಲಿ ರಾಜ್ಯ ರಾಜಕೀಯ ಇದೆ.








