ಬಳ್ಳಾರಿ: ಕನ್ನಡ ರಂಗಭೂಮಿಯ ಮೇರು ಪ್ರತಿಭೆ ನಾಡೋಜ ಸುಭದ್ರಮ್ಮ ಮನ್ಸೂರ್ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುಭದ್ರಮ್ಮ ಮನ್ಸೂರ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದು, ಕನ್ನಡ ರಂಗಭೂಮಿಯ ಕೊಂಡಿಯೊಂದು ಕಳಚಿದಂತಾಗಿದೆ.

ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಾಡೋಜ ಪುರಸ್ಕøತೆ ಸುಭದ್ರಮ್ಮ ಮನ್ಸೂರ್, ಬಳ್ಳಾರಿಯ ರಂಗಭೂಮಿಯ ದಂತಕತೆಯಾಗಿದ್ದರು.
ಕಂದಗಲ್ ಹನುಮಂತರಾಯರ `ರಕ್ತರಾತ್ರಿ’ ನಾಟಕದಲ್ಲಿ ದ್ರೌಪದಿ ಪಾತ್ರದಲ್ಲಿನ ಅವರ ಅಭಿನಯ ಕನ್ನಡಿಗರ ಮನಸೂರೆಗೊಂಡಿತ್ತು. ಹೇಮರೆಡ್ಡಿ ಮಲ್ಲಮ್ಮನ ಪಾತ್ರದಲ್ಲಿ ಸುಭದ್ರಮ್ಮ ಅವರ ಪಾತ್ರದಲ್ಲಿ ಅವರ ಅಭಿನಯ ಅಮೋಘವಾಗಿತ್ತು.
ನೂರಾರು ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿದ್ದ ಸುಭದ್ರಮ್ಮ ಮನ್ಸೂರ್, ಹಳ್ಳಿ ಹಳ್ಳಿಗೂ ಪರಿಚಿತರಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಪ್ರತಿ ನಾಟಕ ಪ್ರದರ್ಶನ ವೇಳೆ ಸುಭದ್ರಮ್ಮ ಆವರಿಂದ ಅಕ್ಕಮಹಾದೇವಿಯ `ಬೆಟ್ಟದ ಮೇಲೊಂದು ಮನೆಯ ಮಾಡಿ’ ವಚನವನ್ನು ಹಾಡಿಸಿ ಸಂತಸ ವ್ಯಕ್ತಪಡಿಸುತ್ತಿದ್ದರು.
ದಂತಕತೆಯ ರಂಗಪಯಣ..
ಸುಭದ್ರಮ್ಮ ಮನ್ಸೂರ್ ಅವರದ್ದು ರಂಗಭೂಮಿಯಲ್ಲಿ ಅಮೋಘ ಸಾಧನೆ. ಅರ್ಧಶತಮಾನಗಳ ಕಾಲ ಕಲಾಭಿಮಾನಿಗಳ ಮನಸೂರೆಗೊಂಡಿದ್ದರು. ರಕ್ತರಾತ್ರಿ, ಬಾಣಸಿಗ ಭೀಮ, ಚಿತ್ರಾಂಗದ, ಪಾಂಚಾಲಿಯಂತಹ ಪೌರಾಣಿಕ ನಾಟಕಗಳು, ಸಂಗ್ಯಾಬಾಳ್ಯಾ, ಸೂರ್ಯಶಿಕಾರಿ, ಜೋಕುಮಾರಸ್ವಾಮಿ, ಯಯಾತಿಯಂತಹ ಆಧುನಿಕ ನಾಟಕಗಳು ಸೇರಿದಂತೆ ಅಸಂಖ್ಯ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಕರ್ನಾಟಕ ಏಕೀಕರಣಕ್ಕಿಂತ ಮೊದಲು ಹಾಗೂ ಏಕೀಕರಣದ ನಂತರದ ಕರ್ನಾಟಕದ ರಂಗಭೂಮಿಯ ದಿನಗಳಲ್ಲಿ ಸುಭದ್ರಮ್ಮ ಮನ್ಸೂರ್ ಎಂದರೆ `ಸರ್ವ ಋತು ಕೋಗಿಲೆ’ ಎಂದೇ ಜನಪ್ರಿಯತೆ ಗಳಿಸಿದ್ದರು. ಬಾಲ್ಯದಲ್ಲೇ ರಂಭೂಮಿಗೆ ಪ್ರವೇಶ ಮಾಡಿದ ಸುಭದ್ರಮ್ಮ ಮನ್ಸೂರ್, ಐದು ದಶಕಗಳ ಕಾಲ ರಂಗಭೂಮಿಯಲ್ಲಿ ಆಳ್ವಿಕೆ ನಡೆಸಿದವರು. ತಮ್ಮ ಇಳಿ ವಯಸ್ಸಿನಲ್ಲೂ ಯಾವುದೇ ನಾಟಕ ಪ್ರದರ್ಶನ ನಡೆಯುತ್ತಿದೆ ಎಂದು ಗೊತ್ತಾದರೆ ಹೋಗಿ ನಾಟಕ ಮುಗಿಯುವ ತನಕ ಕುಳಿತು ನೋಡುತ್ತಿದ್ದರು. ಹೀಗಾಗಿ ಅವರ ಉಸಿರೇ ನಾಟಕ..ರಂಗಭೂಮಿಯಾಗಿತ್ತು.









