ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ವಿಚಾರವಾಗಿ ರಾಜ್ಯ ಸರ್ಕಾರದ ಒಳಗೇ ಉಂಟಾಗಿದ್ದ ಗೊಂದಲ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ನಡುವೆ ಈ ಹುದ್ದೆ ಕುರಿತು ಹಲವು ಸುತ್ತಿನ ಚರ್ಚೆಗಳು ನಡೆದರೂ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಅಪೆಕ್ಸ್ ಬ್ಯಾಂಕ್ಗೆ ಆಡಳಿತಾಧಿಕಾರಿ (ಎಒ) ಯನ್ನು ನೇಮಕ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಈ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ. ಈ ನಿರ್ಧಾರವನ್ನು ಡಿಕೆ ಶಿವಕುಮಾರ್ಗೆ ನೀಡಿದ ನೇರ ಕೌಂಟರ್ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸಹಕಾರ ಇಲಾಖೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿಯೇ ಇರುವುದರಿಂದ, ಈ ಅಧಿಕಾರವನ್ನು ಬಳಸಿ ಅವರು ಆಡಳಿತಾಧಿಕಾರಿ ನೇಮಕದ ನಿರ್ಧಾರ ಕೈಗೊಂಡಿದ್ದಾರೆ. ಅಪೆಕ್ಸ್ ಬ್ಯಾಂಕ್ನ ದಿನನಿತ್ಯದ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ಮುಖ್ಯಮಂತ್ರಿ ಅವರ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾಗೆ ವಹಿಸಲಾಗಿದೆ.
ಈ ಕ್ರಮದಿಂದ ಸಹಕಾರ ಕ್ಷೇತ್ರದಲ್ಲಿ ಸಿಎಂ ತಮ್ಮ ಹಿಡಿತವನ್ನು ಮತ್ತಷ್ಟು ಬಲಪಡಿಸಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಒಳರಾಜಕೀಯದಲ್ಲಿ ಇದರಿಂದ ಹೊಸ ಚರ್ಚೆಗಳಿಗೆ ನಾಂದಿ ಹಾಡಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ನಿರ್ಧಾರ ಪಕ್ಷದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.








