ಲಂಡನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ವೈಷಮ್ಯ ಕೇವಲ ಗಡಿರೇಖೆ ಅಥವಾ ಕ್ರಿಕೆಟ್ ಮೈದಾನಕ್ಕೆ ಸೀಮಿತವಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಂಗಳದಲ್ಲಿ ನಡೆದ ಬಿಸಿಬಿಸಿ ಚರ್ಚೆಯಲ್ಲಿ, ಪಾಕಿಸ್ತಾನದ ಸುಳ್ಳು ವಾದಗಳನ್ನು ಭಾರತೀಯ ವಿದ್ಯಾರ್ಥಿಯೊಬ್ಬರು ಧೂಳಿಪಟ ಮಾಡಿದ್ದಾರೆ. ಪಾಕಿಸ್ತಾನದ ಸಚಿವರ ಪುತ್ರನ ಆಧಾರರಹಿತ ಆರೋಪಗಳಿಗೆ, ಭಾರತದ ಕಾನೂನು ವಿದ್ಯಾರ್ಥಿ ನೀಡಿದ ಖಡಕ್ ಉತ್ತರ ಈಗ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
ಪಾಕ್ ವಿದ್ಯಾರ್ಥಿಯ ಸುಳ್ಳಿನ ಸರಮಾಲೆಗೆ ಬ್ರೇಕ್ ಹಾಕಿದ ಭಾರತೀಯ ವಿದ್ಯಾರ್ಥಿ
ಆಕ್ಸ್‌ಫರ್ಡ್ ಯೂನಿಯನ್ ಏರ್ಪಡಿಸಿದ್ದ ಚರ್ಚಾ ಕೂಟದಲ್ಲಿ ಪಾಕಿಸ್ತಾನದ ಫೆಡರಲ್ ಸಚಿವ ಮೊಹಮ್ಮದ್ ರಾಜಾ ಹಯಾತ್ ಹರಾಜ್ ಅವರ ಪುತ್ರ ಹಾಗೂ ಆಕ್ಸ್‌ಫರ್ಡ್ ಯೂನಿಯನ್ ಅಧ್ಯಕ್ಷನಾಗಿರುವ ಮೂಸಾ ಹರಾಜ್, ಭಾರತದ ವಿರುದ್ಧ ವಿಷಕಾರುವ ಪ್ರಯತ್ನ ನಡೆಸಿದ್ದನು. ಆಪರೇಷನ್ ಸಿಂಧೂರ್ ವಿಷಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದೆ ಎಂದು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ವಾದ ಮಂಡಿಸಿದ ಆತ, ಭಾರತದ ವಿದೇಶಾಂಗ ನೀತಿಯನ್ನು ಜನಪ್ರಿಯತೆಗಾಗಿ ನಡೆಸುವ ತಂತ್ರ ಎಂದು ಜರಿದಿದ್ದನು. ಆದರೆ, ಈ ಸುಳ್ಳುಗಳನ್ನು ಸಹಿಸದ ಭಾರತೀಯ ವಿದ್ಯಾರ್ಥಿ ವಿರಾನ್ಸ್ ಭಾನುಷಾಲಿ, ಅಂಕಿಅಂಶಗಳ ಸಹಿತ ತಿರುಗೇಟು ನೀಡುವ ಮೂಲಕ ಪಾಕ್ ವಿದ್ಯಾರ್ಥಿಯನ್ನು ಇಂಗು ತಿಂದ ಮಂಗನಂತಾಗಿಸಿದರು.
ನಾಚಿಕೆ ಇಲ್ಲದ ರಾಷ್ಟ್ರವನ್ನು ನಾಚಿಕೆಪಡಿಸಲು ಸಾಧ್ಯವಿಲ್ಲ
ಚರ್ಚೆಯ ಸಂದರ್ಭದಲ್ಲಿ ವಿರಾನ್ಸ್ ಭಾನುಷಾಲಿ ಆಡಿದ ಮಾತುಗಳು ಈಗ ಪ್ರತಿಯೊಬ್ಬ ಭಾರತೀಯನ ಎದೆಯುಬ್ಬುವಂತೆ ಮಾಡಿದೆ. ಪಾಕಿಸ್ತಾನದ ನಡವಳಿಕೆಯನ್ನು ಕಟುವಾಗಿ ಟೀಕಿಸಿದ ಅವರು, ನಾವು ಕಷ್ಟಪಟ್ಟು ಪಾಠ ಕಲಿತಿದ್ದೇವೆ. ಆದರೆ ಒಂದು ಸತ್ಯವೇನೆಂದರೆ, ನಾಚಿಕೆಯೇ ಇಲ್ಲದ ರಾಷ್ಟ್ರವನ್ನು ನಾವು ನಾಚಿಕೆಪಡಿಸಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಪಾಕಿಸ್ತಾನದ ಮಾನ ಹರಾಜು ಹಾಕಿದರು. ಭಾನುಷಾಲಿ ಅವರ ಈ ವಾಕ್ಚಾತುರ್ಯ ಮತ್ತು ದಿಟ್ಟತನಕ್ಕೆ ನೆರೆದಿದ್ದವರು ಮೂಕವಿಸ್ಮಿತರಾದರು.
ತಮ್ಮ ವಾದವನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸದ ವಿರಾನ್ಸ್, ಭಯೋತ್ಪಾದನೆಯಿಂದ ತಮಗಾದ ವೈಯಕ್ತಿಕ ನೋವನ್ನು ಹಂಚಿಕೊಂಡರು. 2008ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಉಗ್ರರ ಪ್ರಮುಖ ಟಾರ್ಗೆಟ್ ಆಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಅನ್ನು ಉಲ್ಲೇಖಿಸಿದ ಅವರು, ನನ್ನ ಅತ್ತಿಗೆ ಪ್ರತಿದಿನ ಅದೇ ಸಮಯದಲ್ಲಿ ಅದೇ ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದರು. ದೇವರ ದಯೆಯಿಂದ ಅಂದು ಅವರು ಬೇರೆ ರೈಲಿನಲ್ಲಿ ಮನೆಗೆ ತೆರಳಿದ್ದರಿಂದ ಪ್ರಾಣಾಪಾಯದಿಂದ ಪಾರಾದರು ಎಂದು ಭಾವುಕರಾಗಿ ನುಡಿದರು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಸಾಮಾನ್ಯ ಜನರ ಬದುಕಿನ ಮೇಲೆ ಬೀರುವ ಪರಿಣಾಮವನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.
ಇದೇ ವೇದಿಕೆಯಲ್ಲಿ ನಡೆಯಬೇಕಿದ್ದ ಚರ್ಚೆಗೆ ಭಾರತದ ಪ್ರಖ್ಯಾತ ವಕೀಲ ಜೆ ಸಾಯಿ ದೀಪಕ್ ಮತ್ತು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಆಯೋಜಕರು ಮತ್ತು ಪಾಕಿಸ್ತಾನಿ ಲಾಬಿ ನಡೆಸಿದ ಕುತಂತ್ರಗಳನ್ನು ಇವರಿಬ್ಬರೂ ಬಯಲಿಗೆಳೆದಿದ್ದಾರೆ. ಆಹ್ವಾನವನ್ನು ಕೊನೆಯ ಕ್ಷಣದವರೆಗೂ ಸ್ಪಷ್ಟಪಡಿಸದೇ, ಭಾರತೀಯ ತಂಡವು ಚರ್ಚೆಯಿಂದ ಓಡಿಹೋಗಿದೆ ಎಂದು ಬಿಂಬಿಸಲು ಪಾಕಿಸ್ತಾನ ದೊಡ್ಡ ಡ್ರಾಮಾ ಸೃಷ್ಟಿಸಿತ್ತು ಎಂದು ಸಾಯಿ ದೀಪಕ್ ಕಿಡಿಕಾರಿದ್ದಾರೆ. ಆಕ್ಸ್‌ಫರ್ಡ್ ಯೂನಿಯನ್‌ನಂತಹ ಪ್ರತಿಷ್ಠಿತ ಸಂಸ್ಥೆಯನ್ನು ಪಾಕಿಸ್ತಾನವು ತನ್ನ ಕೀಳುಮಟ್ಟದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಮತ್ತು ಅದನ್ನು ಹಂದಿಗಳ ಕೊಟ್ಟಡಿಯಂತೆ ಪರಿವರ್ತಿಸುತ್ತಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ತೇಜೋವಧೆ ಮಾಡಲು ಬಂದ ಪಾಕಿಸ್ತಾನಕ್ಕೆ, ಭಾರತೀಯ ವಿದ್ಯಾರ್ಥಿಯೊಬ್ಬ ಅಕ್ಷರಶಃ ಪಾಠ ಕಲಿಸಿದ್ದಾನೆ. ಸತ್ಯ ಮತ್ತು ದಿಟ್ಟತನದ ಮುಂದೆ ಸುಳ್ಳಿನ ಅರಮನೆಗಳು ಹೆಚ್ಚು ಕಾಲ ನಿಲ್ಲುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.








