ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಮತ್ತು ಸಿಎಂ ಕುರ್ಚಿಯ ವಿಚಾರವಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ಸ್ಫೋಟಗೊಂಡಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಆಂತರಿಕ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದ್ದು, ಡಿಕೆಶಿ ತಮ್ಮದೇ ಶೈಲಿಯಲ್ಲಿ ಪರೋಕ್ಷ ವಾಗ್ದಾಳಿ ನಡೆಸುವ ಮೂಲಕ ಸಿಎಂ ಪಾಳಯಕ್ಕೆ ಚುರುಕು ಮುಟ್ಟಿಸಿದ್ದಾರೆ.
ವೇದಿಕೆ ಏರಿ ಭಾಷಣ ಮಾಡುವುದಷ್ಟೇ ನಾಯಕತ್ವವಲ್ಲ, ಪಕ್ಷಕ್ಕಾಗಿ ತಳಮಟ್ಟದಿಂದ ದುಡಿದವರು ನಾವು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ಡಿಕೆ ಶಿವಕುಮಾರ್ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ನಾನು ಭಾಷಣ ಮಾಡಿ ಹೋಗುವವನಲ್ಲ
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ತಾವು ಪಕ್ಷಕ್ಕಾಗಿ ಪಟ್ಟಿರುವ ಶ್ರಮವನ್ನು ಮತ್ತು ನಿಷ್ಠೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ನಾನು ಎಲ್ಲರ ಹಾಗೆ ಸ್ಟೇಜ್ ಮೇಲೆ ಬಂದು, ಮೈಕ್ ಹಿಡಿದು ಭಾಷಣ ಬಿಗಿದು ಸುಮ್ಮನೆ ಹೋಗುವವನಲ್ಲ. ಕೇವಲ ಮಾತುಗಳಿಂದಲೇ ರಾಜಕೀಯ ಮಾಡಿದವನಲ್ಲ ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಅವರಿಗೆ ಟಾಂಗ್ ನೀಡಿದರು.
ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ
ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತಾವು ಹಗಲಿರುಳು ಶ್ರಮಿಸಿರುವುದನ್ನು ಸ್ಮರಿಸಿದ ಡಿಕೆಶಿ, ನಾನು ಈ ಪಕ್ಷದ ಲೈಫ್ ಟೈಮ್ ವರ್ಕರ್. ನಾನು ಪಕ್ಷದ ಬಾವುಟ ಕಟ್ಟಿದ್ದೇನೆ, ಕಚೇರಿಯ ಕಸ ಗುಡಿಸಿದ್ದೇನೆ, ಗೋಡೆಗಳಿಗೆ ಪೋಸ್ಟರ್ ಅಂಟಿಸಿದ್ದೇನೆ. ಪಕ್ಷಕ್ಕೆ ಏನೇನು ಬೇಕು ಎಲ್ಲವನ್ನೂ ಮೌನವಾಗಿ ಮಾಡಿದ್ದೇನೆ. ಕಷ್ಟ ಕಾಲದಲ್ಲಿ ಪಕ್ಷವನ್ನು ಮುನ್ನಡೆಸಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು. ಈ ಮಾತುಗಳು ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರ ನಡುವಿನ ಕಂದಕವನ್ನು ಮತ್ತೆ ಮುನ್ನೆಲೆಗೆ ತಂದಂತಿದೆ.
ಹೈಕಮಾಂಡ್ ಮಾತಿಗೆ ಬದ್ಧ
ಇದೇ ವೇಳೆ ಸಿಎಂ ಬದಲಾವಣೆ ಅಥವಾ ಕುರ್ಚಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಮತ್ತು ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ದೆಹಲಿ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಾವು ನಡೆದುಕೊಳ್ಳುತ್ತೇವೆ. ನನಗೆ ಎಷ್ಟೇ ದೊಡ್ಡ ಹುದ್ದೆ ಸಿಕ್ಕರೂ, ಯಾವ ಪೋಸ್ಟ್ ಇದ್ದರೂ ಮೂಲತಃ ನಾನು ಪಕ್ಷದ ಕಾರ್ಯಕರ್ತ ಎಂದು ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಮತ್ತೆ ಜೋರಾಗುವ ಮುನ್ಸೂಚನೆ ನೀಡಿದೆ. ಮೂಲ ಕಾಂಗ್ರೆಸ್ಸಿಗ ಹಾಗೂ ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ಸಿಗಬೇಕು ಎಂಬ ಸಂದೇಶವನ್ನು ಡಿಕೆಶಿ ರವಾನಿಸಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.








