ದಾವಣಗೆರೆ: ರಾಜ್ಯದಲ್ಲಿ ಖಾಲಿಯಾಗಿರುವ ಖಜಾನೆಯನ್ನು ತುಂಬಿಸಲು ಮತ್ತು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ನೆಪದಲ್ಲಿ ಹಗಲು ದರೋಡೆಗೆ ಇಳಿದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಗುರುವಾರ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಸ್ಮೃತಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹೊಸ ಮದ್ಯದಂಗಡಿ ಪರವಾನಗಿಗೆ 1.95 ಕೋಟಿ ರೂ ಫಿಕ್ಸ್
ರಾಜ್ಯ ಸರ್ಕಾರವು ಮದ್ಯದಂಗಡಿ ಪರವಾನಗಿ ಒಂದಕ್ಕೆ ಬರೋಬ್ಬರಿ 1.95 ಕೋಟಿ ರೂಪಾಯಿ ದರ ನಿಗದಿ ಮಾಡಿದೆ. ಇದು ಲೂಟಿಯಲ್ಲದೆ ಮತ್ತೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಹಣ ಸಂಗ್ರಹ ಒಂದೇ ಗುರಿಯಾಗಿಸಿಕೊಂಡಿರುವ ಸರ್ಕಾರ, ಜನರಿಗೆ ದೊಡ್ಡ ಪ್ರಮಾಣದಲ್ಲಿ ಕುಡಿತದ ಚಟ ಹತ್ತಿಸಲು ಪ್ರೇರಣೆ ನೀಡುತ್ತಿದೆ. ಮದ್ಯದಂಗಡಿ ಹರಾಜು ಮೂಲಕ ಸುಲಿಗೆ ಮಾಡುವುದು ರಾಜ್ಯ ಸರ್ಕಾರವು ಜನತೆಗೆ ನೀಡುತ್ತಿರುವ ಹೊಸ ವರ್ಷದ ಕೊಡುಗೆಯಾಗಿದೆ ಎಂದು ವ್ಯಂಗ್ಯವಾಡಿದರು.
ದಲಿತರ ಹಣ ದುರ್ಬಳಕೆ
ಕೇವಲ ಅಬಕಾರಿ ಇಲಾಖೆ ಮಾತ್ರವಲ್ಲದೇ ಪ್ರತಿಯೊಂದು ಇಲಾಖೆಯಲ್ಲೂ ಲೂಟಿ ನಡೆಯುತ್ತಿದೆ ಎಂದು ದೂರಿದ ಅವರು, ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಎಸ್ಪಿ) ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್ಪಿ) ಅಡಿಯಲ್ಲಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಸರ್ಕಾರ ಅನ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದ ಖಜಾನೆಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
5000 ಕೋಟಿ ಲೆಕ್ಕ ಸಿಗುತ್ತಿಲ್ಲ
ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರ ಖಾತೆಗೆ ಜಮಾ ಆಗಬೇಕಾದ 5000 ಕೋಟಿ ರೂಪಾಯಿ ಹಣ ಎಲ್ಲಿ ಹೋಯಿತು ಎಂಬ ಬಗ್ಗೆ ಮುಖ್ಯಮಂತ್ರಿಗಳು ಈವರೆಗೂ ಸ್ಪಷ್ಟನೆ ನೀಡಿಲ್ಲ. ಸ್ವತಃ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನಗೆ ಈ ವಿಷಯವೇ ಗೊತ್ತಿಲ್ಲ ಎಂದು ಹೇಳುತ್ತಿರುವುದು ಆಶ್ಚರ್ಯಕರ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಆರ್ಥಿಕ ತಜ್ಞ ಎಂದು ಹೇಳಿಕೊಳ್ಳುವ ಇಂತಹ ಮುಖ್ಯಮಂತ್ರಿಗಳನ್ನು ಪ್ರಪಂಚದಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಅಭಿವೃದ್ಧಿ ಶೂನ್ಯ, ಬರೀ ಕುರ್ಚಿ ಕಿತ್ತಾಟ
ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಪಾತಾಳಕ್ಕೆ ಕುಸಿದಿದೆ. ರಸ್ತೆಗಳ ದುಸ್ಥಿತಿಯೇ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಕೇವಲ ಗ್ಯಾರಂಟಿ ಜಪ ಮಾಡುತ್ತಾ ಎರಡೂವರೆ ವರ್ಷ ಕಳೆದಿದ್ದಾರೆ. ಅಭಿವೃದ್ಧಿ ಕಡೆಗಣಿಸಿ, ಕೇವಲ ಅಧಿಕಾರ ಹಂಚಿಕೆ ಹಾಗೂ ಕುರ್ಚಿ ಕಿತ್ತಾಟದಲ್ಲಿಯೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಜನತೆ ಇವರ ಆಟವನ್ನು ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವರು ಎಚ್ಚರಿಸಿದರು.








