ನವದೆಹಲಿ: ಸದಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮತ್ತು ಬಿಜೆಪಿ ವಿರುದ್ಧ ಕಟುವಾದ ಶಬ್ದಗಳಿಂದ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಅವರ ಅನಿರೀಕ್ಷಿತ ನಡೆ ಈಗ ಸ್ವಪಕ್ಷಕ್ಕೇ ಮುಜುಗರ ತಂದೊಡ್ಡಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಪರೋಕ್ಷವಾಗಿ ಚಾಟಿ ಬೀಸುವ ಭರದಲ್ಲಿ, ದಿಗ್ವಿಜಯ್ ಸಿಂಗ್ ಅವರು ಕಡು ವೈರಿಗಳಾದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಶೈಲಿಯನ್ನು ಬಹಿರಂಗವಾಗಿ ಶ್ಲಾಘಿಸಿರುವುದು ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಒಂದು ಕಾಲದ ಕಟ್ಟಾ ಆರ್‌ಎಸ್‌ಎಸ್ ವಿರೋಧಿ ನಾಯಕನ ಬಾಯಲ್ಲಿ ಬಿಜೆಪಿ ಮತ್ತು ಸಂಘದ ಶಿಸ್ತಿನ ಬಗ್ಗೆ ಮೆಚ್ಚುಗೆಯ ಮಾತುಗಳು ಹೊರಬಿದ್ದಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಕಂಪನ ಸೃಷ್ಟಿಸಿದ್ದು, ಇದು ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಸ್ಫೋಟವೇ ಎಂಬ ಚರ್ಚೆಗೆ ಗ್ರಾಸವಾಗಿದೆ.
ನೆಲದ ಮೇಲೆ ಕುಳಿತಿದ್ದ ಮೋದಿ ಇಂದು ಪ್ರಧಾನಿ: ವೈರಲ್ ಆದ ಫೋಟೋ ಸಂದೇಶ
ಶನಿವಾರ ಮುಂಜಾನೆ ದಿಗ್ವಿಜಯ್ ಸಿಂಗ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡ 1990ರ ದಶಕದ ಕಪ್ಪು-ಬಿಳುಪು ಫೋಟೋ ಒಂದು ದೊಡ್ಡ ರಾಜಕೀಯ ಸಂದೇಶವನ್ನೇ ರವಾನಿಸಿದೆ. ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿ ಅವರು ವೇದಿಕೆಯ ಕುರ್ಚಿಯ ಮೇಲೆ ಕುಳಿತಿದ್ದರೆ, ಯುವ ನರೇಂದ್ರ ಮೋದಿಯವರು ಮೈಕ್ ಹಿಡಿದು ವೇದಿಕೆಯ ಕೆಳಗೆ ನೆಲದ ಮೇಲೆ ಕುಳಿತಿರುವ ದೃಶ್ಯ ಆ ಫೋಟೋದಲ್ಲಿತ್ತು.
ಈ ಚಿತ್ರವನ್ನು ಹಂಚಿಕೊಂಡಿರುವ ದಿಗ್ವಿಜಯ್ ಸಿಂಗ್, ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂಬ ವ್ಯವಸ್ಥೆಯೊಳಗೆ ಒಬ್ಬ ಸಾಮಾನ್ಯ ಕಾರ್ಯಕರ್ತ ಹೇಗೆ ಬೆಳೆಯಬಲ್ಲ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಬಣ್ಣಿಸಿದ್ದಾರೆ. ಒಮ್ಮೆ ಹಿರಿಯ ನಾಯಕರ ಕಾಲ ಬಳಿ ನೆಲದ ಮೇಲೆ ಕುಳಿತಿದ್ದ ತಳಮಟ್ಟದ ಕಾರ್ಯಕರ್ತ, ಮುಂದೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗುವಂತಹ ಅವಕಾಶಗಳು ಸಂಘ ಪರಿವಾರದ ಪರಿಸರ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ ಎಂಬ ಅರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಪೋಸ್ಟ್‌ನ ಕೊನೆಯಲ್ಲಿ ಜೈ ಸಿಯಾ ರಾಮ್ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೈಕಮಾಂಡ್‌ಗೆ ಪರೋಕ್ಷ ಎಚ್ಚರಿಕೆ?
ದಿಗ್ವಿಜಯ್ ಸಿಂಗ್ ಅವರ ಈ ನಡೆ ಕೇವಲ ಮೋದಿಯವರನ್ನು ಹೊಗಳಲು ಸೀಮಿತವಾಗಿಲ್ಲ, ಬದಲಿಗೆ ಇದು ಕಾಂಗ್ರೆಸ್ ನಾಯಕತ್ವಕ್ಕೆ ನೀಡಿದ ಎಚ್ಚರಿಕೆ ಗಂಟೆ ಎಂದೇ ವಿಶ್ಲೇಷಿಸಲಾಗುತ್ತಿದೆ. ತಮ್ಮ ಈ ಪೋಸ್ಟ್‌ನಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಟ್ಯಾಗ್ ಮಾಡಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಕಳೆದ ವಾರವಷ್ಟೇ ರಾಹುಲ್ ಗಾಂಧಿ ಅವರಿಗೆ ಪಕ್ಷದ ಆಂತರಿಕ ಸುಧಾರಣೆಗಳ ಬಗ್ಗೆ ದಿಗ್ವಿಜಯ್ ಸಿಂಗ್ ಸಲಹೆ ನೀಡಿದ್ದರು. ಪಕ್ಷದೊಳಗೆ ಬದಲಾವಣೆ ತರುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದ ಅವರು, ಇದೀಗ ಬಿಜೆಪಿಯ ಉದಾಹರಣೆ ನೀಡುವ ಮೂಲಕ ಕಾಂಗ್ರೆಸ್‌ನಲ್ಲಿನ ಕುಟುಂಬ ರಾಜಕಾರಣ ಮತ್ತು ಅರ್ಹರಿಗೆ ಸಿಗದ ಮನ್ನಣೆಯ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಸತ್ಯ ಬಾಂಬ್ ಅಸ್ತ್ರ ಪ್ರಯೋಗ
ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಯನ್ನು ಬಿಜೆಪಿ ತಕ್ಷಣವೇ ಕಾಂಗ್ರೆಸ್ ವಿರುದ್ಧದ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, ಇದೊಂದು ಸತ್ಯ ಬಾಂಬ್ ಎಂದು ಬಣ್ಣಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರ ಟ್ವೀಟ್ ಕಾಂಗ್ರೆಸ್ ಪಕ್ಷದ ಆಂತರಿಕವಾಗಿ ಪ್ರಜಾಪ್ರಭುತ್ವ ಇಲ್ಲದಿರುವುದನ್ನು ಮತ್ತು ನಿರಂಕುಶ ಪ್ರವೃತ್ತಿಯನ್ನು ಬಯಲಿಗೆಳೆದಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಉನ್ನತ ಹುದ್ದೆಗೇರಬಹುದು, ಆದರೆ ಕಾಂಗ್ರೆಸ್‌ನಲ್ಲಿ ಅದು ಸಾಧ್ಯವಿಲ್ಲ ಎಂಬುದನ್ನು ಹಿರಿಯ ನಾಯಕರೇ ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಈ ಆಘಾತಕಾರಿ ಸತ್ಯಕ್ಕೆ ಪ್ರತಿಕ್ರಿಯಿಸುವ ಧೈರ್ಯ ತೋರಿಸುವರೇ ಎಂದು ಕೇಶವನ್ ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ಇದು ಕಾಂಗ್ರೆಸ್‌ನಲ್ಲಿನ ಬಹಿರಂಗ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ. ಪಕ್ಷದ ನಿಷ್ಠಾವಂತ ನಾಯಕರಿಗೇ ಈಗ ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆ ಬೇಸರ ಮೂಡಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ಪಕ್ಷದ ಸುಧಾರಣೆಗೆ ಒತ್ತಾಯಿಸುವ ಭರದಲ್ಲಿ ದಿಗ್ವಿಜಯ್ ಸಿಂಗ್ ಅವರು ಎದುರಾಳಿ ಪಾಳೆಯವನ್ನು ಹೊಗಳಿರುವುದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಅವರು ಬಹಿರಂಗವಾಗಿ ಬಿಜೆಪಿ ಹಾಗೂ ಅದರ ಮಾರ್ಗದರ್ಶಕ ಸಂಸ್ಥೆಯಾದ ಆರ್ ಎಸ್ ಎಸ್ ಹೊಗಳಿರುವುದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ
ಪಕ್ಷದಲ್ಲಿನ ಆಂತರಿಕ ಸುಧಾರಣೆಗಳ ಅಗತ್ಯವನ್ನು ರಾಹುಲ್ ಗಾಂಧಿಗೆ ಸೂಚಿಸಿದ ಒಂದು ವಾರದ ನಂತರ ಈ ಹೇಳಿಕೆ ನೀಡುವ ಮೂಲಕ ದಿಗ್ವಿಜಯ ಸಿಂಗ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
1990ರ ದಶಕದ ಪ್ರಧಾನಿ ನರೇಂದ್ರ ಮೋದಿಯವರ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಅವರು, ವಿವಿಧ ವಿಷಯಗಳ ಕುರಿತು ಕಾಂಗ್ರೆಸ್ ನ್ನು ಗುರಿಯಾಗಿಸಿ, ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ನ್ನು ಹೊಗಳಿದ್ದಾರೆ.
ಗುಜರಾತ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಹಿರಿಯ ಎಲ್ ಕೆ ಅಡ್ವಾಣಿ ಅವರ ಬಳಿ ಯುವ ನರೇಂದ್ರ ಮೋದಿ ಅವರು ನೆಲದ ಮೇಲೆ ಕುಳಿತಿರುವುದನ್ನು ತೋರಿಸುವ ಸ್ಕ್ರೀನ್ ಶಾಟ್ ನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಡ್ವಾಣಿ ಬಳಿ ನೆಲದ ಮೇಲೆ ಕುಳಿತಿರುವ ಮೋದಿ ಅವರನ್ನು ಉಲ್ಲೇಖಿಸಿ, ಒಮ್ಮೆ ನೆಲದ ಮೇಲೆ ಕುಳಿತಿದ್ದ ತಳಮಟ್ಟದ ಕಾರ್ಯಕರ್ತರು ಸಂಘ-ಬಿಜೆಪಿ ಪರಿಸರ ವ್ಯವಸ್ಥೆಯೊಳಗೆ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಬಹುದು ಎಂಬುದನ್ನು ಶ್ಲಾಘಿಸಿದ್ದಾರೆ. ಕೊನೆಯಲ್ಲಿ ಜೈ ಶಿಯಾ ರಾಮ್ ಎಂದು ಪೋಸ್ಟ್ ಮಾಡಿದ್ದರು.
ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಈ ಪೋಸ್ಟನ್ನು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಲು ಬಳಸಿಕೊಂಡಿತು. ಸಿಂಗ್ ಅವರ ಟ್ವೀಟ್ ಕಾಂಗ್ರೆಸ್ ನ “ನಿರಂಕುಶ ಮತ್ತು ಪ್ರಜಾಪ್ರಭುತ್ವ ವಿರೋಧಿ” ಆಂತರಿಕ ಕಾರ್ಯಚಟುವಟಿಕೆಯನ್ನು ಬಹಿರಂಗಪಡಿಸುವ “ಸತ್ಯ ಬಾಂಬ್” ಎಂದು ಬಿಜೆಪಿ ವಕ್ತಾರ ಸಿಆರ್ ಕೇಶವನ್ ಹೇಳಿದ್ದಾರೆ.
“ರಾಹುಲ್ ಗಾಂಧಿ ಧೈರ್ಯ ತೋರಿಸುತ್ತಾರೆಯೇ ಮತ್ತು ಈ ಆಘಾತಕಾರಿ ಸತ್ಯ ಬಾಂಬ್‌ಗೆ ಪ್ರತಿಕ್ರಿಯಿಸುತ್ತಾರೆಯೇ ಎಂದು ಕೇಶವನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ
ಸಿಂಗ್ ಅವರ ಪೋಸ್ಟ್ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪಕ್ಷದ ಹೈಕಮಾಂಡ್‌ಗೆ ಸಂದೇಶದ ರೀತಿಯಲ್ಲಿ ನೋಡಲಾಗುತ್ತಿದೆ. ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಲ್ಲದೇ ಅಧಿಕೃತ ಕಾಂಗ್ರೆಸ್ ಎಕ್ಸ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ್ದಾರೆ. ಪಕ್ಷದ ಸುಧಾರಣೆಯನ್ನು ಒತ್ತಿ ಹೇಳಲು ಈ ರೀತಿಯ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಡಿಸೆಂಬರ್ 19 ರಂದು ಪಕ್ಷದೊಳಗೆ ಸುಧಾರಣೆ ಕುರಿತು ರಾಹುಲ್ ಗಾಂಧಿಯನ್ನು ಒತ್ತಾಯಿಸುವ ಪೋಸ್ಟ್ ಒಂದನ್ನು ರಾಹುಲ್ ಗಾಂಧಿಗೆ ಮಾಡಿದ್ದರು. ಆಂತರಿಕ ಬದಲಾವಣೆಗಳ ಬಗ್ಗೆ ರಾಹುಲ್ ಗಾಂಧಿಗೆ ಮನವರಿಕೆ ಮಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಬಾಹ್ಯವಾಗಿ ಬೋಧಿಸುತ್ತದೆ ಆದರೆ ಆಂತರಿಕವಾಗಿ ಅದನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿಯ ಟೀಕೆಗಳನ್ನು ದಿಗ್ವಿಜಯ್ ಸಿಂಗ್ ಉಲ್ಲೇಖಿಸಿದ್ದರು.
ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಸಿಂಗ್ ಅವರ ಪೋಸ್ಟ್ ಬಹಿರಂಗ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.








