‘ಅಯೋಧ್ಯೆ ನೇಪಾಳದಲ್ಲಿದೆ’ ನೇಪಾಳ ಪ್ರಧಾನಿ ಹೇಳಿಕೆಯನ್ನು ಖಂಡಿಸಿದ ಮುಸ್ಲಿಂ ನಾಯಕರು
ಹೊಸದಿಲ್ಲಿ, ಜುಲೈ 16: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಅವರ ಅಯೋಧ್ಯೆ ನೇಪಾಳದಲ್ಲಿದೆ ಎಂಬ ಹೇಳಿಕೆಗೆ ಹಿಂದೂ ಸಂತರು ಮತ್ತು ಸಂಬಂಧಿತ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಮುಸ್ಲಿಂ ನಾಯಕರು ಈ ಹೇಳಿಕೆಯನ್ನು ಖಂಡಿಸಿ ಮಾತನಾಡಿದ್ದಾರೆ.
ಬಾಬ್ರಿ ಮಸೀದಿ ಪರ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಅವರು, “ಈ ವಿಷಯದ ಬಗ್ಗೆ ಹನುಮಾನ್ ಭಗವಂತ ಕೋಪಗೊಂಡರೆ, ಅವನು ನೇಪಾಳವನ್ನು ತನ್ನ ಒಂದು ಹೊಡೆತದಿಂದ ನಾಶಪಡಿಸುತ್ತಾನೆ. ರಾಮ್ ಎಲ್ಲಿಗೆ ಹೋದರೂ, ಹನುಮಾನ್ ಅವನನ್ನು ಹಿಂಬಾಲಿಸುತ್ತಾನೆ. ನೇಪಾಳದ ಪ್ರಧಾನ ಮಂತ್ರಿಗೆ ಬಹುಶಃ ದೇಶದಲ್ಲಿ ಮತ್ತು ಜಗತ್ತಿನಲ್ಲಿಯೇ ಅಯೋಧ್ಯೆಗಿರುವ ಮಹತ್ವದ ಬಗ್ಗೆ ತಿಳಿದಿಲ್ಲ. ಅವರು ಒಮ್ಮೆ ಅಯೋಧ್ಯೆಗೆ ಬಂದರೆ, ಅದರ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಅರಿತುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಮುಸ್ಲಿಂ ಧರ್ಮಗುರು ಮೌಲಾನಾ ಸೈಫ್ ಅಬ್ಬಾಸ್ ಕೂಡ ಓಲಿ ನೀಡಿದ ಹೇಳಿಕೆಯನ್ನು ಖಂಡಿಸಿದರು ಮತ್ತು ಇದು ‘ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ’ ಎಂದು ಹೇಳಿದ್ದಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿ ಚೀನಾ ಮತ್ತು ಪಾಕಿಸ್ತಾನದ ಆದೇಶದ ಮೇರೆಗೆ ನೇಪಾಳ ಪ್ರಧಾನಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಓಲಿ ತನ್ನನ್ನು ಇತರರ ಕೈಯಲ್ಲಿ ಕೈಗೊಂಬೆಯಾಗಲು ಅನುಮತಿಸಬಾರದು ಎಂದ ಅವರು ಓಲಿ ಕೂಡಲೇ ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.








