ಕರ್ನಾಟಕದಲ್ಲಿ ಕೆತ್ತಲಾದ ಸ್ವರ್ಣಲೇಪಿತ ರಾಮಲಲ್ಲಾ ವಿಗ್ರಹವು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಯಶಸ್ವಿಯಾಗಿ ತಲುಪಿದೆ. ಭಕ್ತಿಭಾವ ಹಾಗೂ ಶಿಲ್ಪಕಲೆಯ ಅಪೂರ್ವ ಸಂಗಮವಾಗಿರುವ ಈ ವಿಗ್ರಹವನ್ನು ರಾಮ ಮಂದಿರದ ಸಂಕೀರ್ಣದೊಳಗೆ ಭಕ್ತಿಪೂರ್ವಕವಾಗಿ ಅನಾವರಣ ಮಾಡಲಾಗಿದೆ.
ಯಾತ್ರಿ ಸುವಿಧಾ ಕೇಂದ್ರದ ಸಂಕೀರ್ಣದಲ್ಲಿರುವ ತುಳಸಿದಾಸ ದೇವಾಲಯದ ಬಳಿ ರಾಮಲಲ್ಲಾ ವಿಗ್ರಹವನ್ನು ಸ್ಥಾಪನೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ವಿಧಿವಿಧಾನಗಳು ನೆರವೇರಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಪೀಠಾಧೀಶ್ವರ ಸ್ವಾಮಿ ವಿಶ್ವತೀರ್ಥ ಪ್ರಸನ್ನಾಚಾರ್ಯ, ಮಹಂತ್ ದಿನೇಂದ್ರ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾಧುಸಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರ್ನಾಟಕದ ಶಿಲ್ಪಿಗಳು ತಮ್ಮ ಕೈಚಳಕ ಮತ್ತು ನಿಷ್ಠೆಯಿಂದ ರೂಪಿಸಿದ ಈ ಚಿನ್ನಲೇಪಿತ ರಾಮಲಲ್ಲಾ ವಿಗ್ರಹವು ದೇಶದ ಸಾಂಸ್ಕೃತಿಕ ಏಕತೆಗೆ ಮತ್ತೊಂದು ಪ್ರತೀಕವಾಗಿದೆ. ಅಯೋಧ್ಯೆಯಲ್ಲಿ ವಿಗ್ರಹ ಸ್ಥಾಪನೆಯೊಂದಿಗೆ ಭಕ್ತರಲ್ಲಿ ಭಾರೀ ಸಂಭ್ರಮ ಮನೆಮಾಡಿದೆ.








