ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಸಾಹಿತಿ ಬಿ. ರಾಮಚಂದ್ರಪ್ಪ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಶಾಲೆಯಲ್ಲಿ ಒಂದೇ ಒಂದು ಮಗು ಇದ್ದರೂ ಆ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದ ಸಚಿವರು, ನಾವು ಶಾಲೆಗಳನ್ನು ವಿಲೀನ ಮಾಡುವ ಉದ್ದೇಶವನ್ನೂ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪೋಷಕರು ಮತ್ತು ಗ್ರಾಮಸ್ಥರು ತಮ್ಮ ಸ್ವಇಚ್ಛೆಯಿಂದ KPS (ಕರ್ನಾಟಕ ಪಬ್ಲಿಕ್ ಶಾಲೆ) ಗೆ ವಿಲೀನ ಮಾಡುವುದಾಗಿ ನಿರ್ಧರಿಸಿದರೆ, ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಂದೇ ಮಗು ಇದ್ದರೂ ಆ ಶಾಲೆಯಲ್ಲಿ ಶಿಕ್ಷಕರು ಇರುತ್ತಾರೆ, ಮಧ್ಯಾಹ್ನದ ಊಟವೂ ನೀಡಲಾಗುತ್ತದೆ. ಶಿಕ್ಷಣದಿಂದ ಯಾವುದೇ ಮಗುವನ್ನು ವಂಚಿಸುವ ಪ್ರಶ್ನೆಯೇ ಇಲ್ಲ, ಎಂದು ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಉಳಿವು ಮತ್ತು ಗುಣಮಟ್ಟ ಹೆಚ್ಚಿಸುವುದೇ ಸರ್ಕಾರದ ಮುಖ್ಯ ಗುರಿಯಾಗಿದ್ದು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶದ ಮಕ್ಕಳಿಗೆ ಶಿಕ್ಷಣ ಸೌಲಭ್ಯ ನಿರಂತರವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.








