ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಒಟ್ಟು 20 ಸಾರ್ವತ್ರಿಕ ರಜೆಗಳು ಹಾಗೂ 21 ಪರಿಮಿತ ರಜಾ ದಿನಗಳಿಗೆ ಸಚಿವ ಸಂಪುಟದ ಅನುಮೋದನೆ ನೀಡಿದೆ. ಮುಂಬರುವ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿರುವ ರಜೆಗಳ ಸಂಪೂರ್ಣ ವಿವರ ಇಲ್ಲಿದೆ.
ಭಾನುವಾರ ಬಂದ ಪ್ರಮುಖ ಹಬ್ಬಗಳು: ನೌಕರರಿಗೆ ನಿರಾಸೆ
2026ರ ರಜಾ ಪಟ್ಟಿಯನ್ನು ಗಮನಿಸಿದರೆ ಸರ್ಕಾರಿ ನೌಕರರಿಗೆ ಕೊಂಚ ನಿರಾಸೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರಮುಖ ಆಚರಣೆಗಳು ಮತ್ತು ದೊಡ್ಡ ಹಬ್ಬಗಳು ಭಾನುವಾರ ಹಾಗೂ ಎರಡನೇ ಶನಿವಾರದಂದು ಬಂದಿವೆ. ಭಾನುವಾರ ಮತ್ತು ಎರಡನೇ ಶನಿವಾರಗಳು ಈಗಾಗಲೇ ಸರ್ಕಾರಿ ರಜಾ ದಿನಗಳಾಗಿರುವುದರಿಂದ, ಈ ಕೆಳಗಿನ ಹಬ್ಬಗಳನ್ನು ಪ್ರತ್ಯೇಕ ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ನಮೂದಿಸಲಾಗಿಲ್ಲ
ಮಹಾ ಶಿವರಾತ್ರಿ: ಫೆಬ್ರವರಿ 15 (ಭಾನುವಾರ)
ಮಹಾಲಯ ಅಮವಾಸ್ಯೆ: ಅಕ್ಟೋಬರ್ 10 (ಎರಡನೇ ಶನಿವಾರ)
ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 25 (ಭಾನುವಾರ)
ಕನ್ನಡ ರಾಜ್ಯೋತ್ಸವ: ನವೆಂಬರ್ 1 (ಭಾನುವಾರ)
ನರಕ ಚತುರ್ದಶಿ: ನವೆಂಬರ್ 8 (ಭಾನುವಾರ)
ಈ ಪ್ರಮುಖ ದಿನಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ನೌಕರರು ಹೆಚ್ಚುವರಿ ರಜೆಯ ಲಾಭವನ್ನು ಕಳೆದುಕೊಳ್ಳಲಿದ್ದಾರೆ.
ಕೊಡಗು ಜಿಲ್ಲೆಗೆ ವಿಶೇಷ ರಜೆಗಳ ಘೋಷಣೆ
ಕೊಡಗು ಜಿಲ್ಲೆಯ ಸಂಪ್ರದಾಯ ಮತ್ತು ಸ್ಥಳೀಯ ಆಚರಣೆಗಳನ್ನು ಪರಿಗಣಿಸಿ, ಸರ್ಕಾರವು ಆ ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ವಿಶೇಷ ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ಘೋಷಿಸಿದೆ:
ದಿನಾಂಕ 03.09.2026 (ಗುರುವಾರ): ಕೈಲ್ ಮೂಹೂರ್ತ
ದಿನಾಂಕ 18.10.2026 (ಭಾನುವಾರ): ತುಲಾ ಸಂಕ್ರಮಣ
ದಿನಾಂಕ 26.11.2026 (ಗುರುವಾರ): ಹುತ್ತರಿ ಹಬ್ಬ
ಚಂದ್ರದರ್ಶನ ಮತ್ತು ಮುಸ್ಲಿಂ ಹಬ್ಬಗಳು
ಪಟ್ಟಿಯಲ್ಲಿ ನಿಗದಿಪಡಿಸಲಾದ ಮುಸಲ್ಮಾನ ಬಾಂಧವರ ಹಬ್ಬಗಳು ಚಂದ್ರದರ್ಶನ ಅಥವಾ ಇತರೆ ಕಾರಣಗಳಿಂದ ನಿಗದಿತ ದಿನಾಂಕದಂದು ಬೀಳದಿದ್ದರೆ, ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂತಹ ಸಂದರ್ಭದಲ್ಲಿ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರು ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನದಂದು ರಜೆ ಪಡೆಯಲು ಮಂಜೂರಾತಿ ನೀಡಬಹುದಾಗಿದೆ.



ಕಚೇರಿ ಕಾರ್ಯನಿರ್ವಹಣೆ ಬಗ್ಗೆ ಸೂಚನೆ
ಸಾರ್ವತ್ರಿಕ ರಜಾ ದಿನಗಳಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ, ಇಲಾಖೆಯ ಜರೂರು ಕೆಲಸಗಳು ಮತ್ತು ತುರ್ತು ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಆಯಾ ಇಲಾಖಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.








