ಬೆಂಗಳೂರು ಕೋಗಿಲು ಲೇಔಟ್ನಲ್ಲಿನ ಅಕ್ರಮ ನಿರ್ಮಾಣ ತೆರವು ಕಾರ್ಯಾಚರಣೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೋಗಿಲು ಲೇಔಟ್ ನಿವಾಸಿಗಳನ್ನು ಸ್ಥಳಾಂತರಿಸುವ ಮೊದಲು ಸರ್ಕಾರ ಸೂಕ್ತ ನೋಟಿಸ್ ನೀಡಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಕೂಡ ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೋಗಿಲು ಪ್ರದೇಶವು ಸರ್ಕಾರದ ಸ್ವತ್ತಾಗಿದ್ದು, ಅಲ್ಲಿ ಜನರು ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ಶಶಿ ತರೂರ್ ತಿಳಿಸಿದ್ದಾರೆ. ಈ ಜಾಗ ಹಿಂದೆ ಕಸದ ತೊಟ್ಟಿ ಆಗಿದ್ದು, ವಿಷಕಾರಿ ತ್ಯಾಜ್ಯದಿಂದ ಭೂಗತ ನೀರು ಕಲುಷಿತಗೊಂಡಿತ್ತು. ಈ ಕಾರಣದಿಂದಾಗಿ ಆ ಸ್ಥಳ ಮಾನವ ವಾಸಕ್ಕೆ ಯೋಗ್ಯವಾಗಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಹಾಗೂ ಪರಿಸರದ ದೃಷ್ಟಿಯಿಂದ ಈ ರೀತಿಯ ಅಕ್ರಮ ವಾಸಸ್ಥಾನಗಳನ್ನು ತೆರವುಗೊಳಿಸುವುದು ಅಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ತರೂರ್, ಈ ಕಾರ್ಯಾಚರಣೆ ಮಾನವೀಯ ರೀತಿಯಲ್ಲಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಯಾರನ್ನೂ ಏಕಾಏಕಿ ಬೀದಿಗೆ ತಳ್ಳಲಾಗಿಲ್ಲ, ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗಿದೆ ಎಂಬುದು ಮುಖ್ಯ ಅಂಶ ಎಂದು ಅವರು ಒತ್ತಿ ಹೇಳಿದರು.
ಕೋಗಿಲು ಲೇಔಟ್ ಧ್ವಂಸ ಕಾರ್ಯಾಚರಣೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ನಡುವೆ, ಕಾಂಗ್ರೆಸ್ ಸಂಸದರಿಂದಲೇ ಈ ಕ್ರಮಕ್ಕೆ ಬೆಂಬಲ ವ್ಯಕ್ತವಾಗಿರುವುದು ಮಹತ್ವ ಪಡೆದುಕೊಂಡಿದೆ.








