ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯ ಬಗ್ಗೆ ಪದೇ ಪದೇ ಅನುಮಾನ ವ್ಯಕ್ತಪಡಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸ್ವತಃ ಕರ್ನಾಟಕದಲ್ಲೇ ಮುಜುಗರದ ಸನ್ನಿವೇಶ ಎದುರಾಗಿದೆ. ಇವಿಎಂಗಳನ್ನು ತಿರುಚಲಾಗುತ್ತದೆ ಎಂಬ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರ ಆರೋಪದ ನಡುವೆಯೇ, ಕರ್ನಾಟಕದ ಜನರು ಇವಿಎಂ ವ್ಯವಸ್ಥೆಯ ಮೇಲೆ ಅಗಾಧವಾದ ನಂಬಿಕೆ ಇಟ್ಟಿದ್ದಾರೆ ಎಂಬ ಸ್ಫೋಟಕ ಸತ್ಯ ಸಮೀಕ್ಷೆಯೊಂದರಿಂದ ಹೊರಬಿದ್ದಿದೆ. ಈ ವರದಿಯು ಈಗ ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ವಿರೋಧ ಪಕ್ಷ ಬಿಜೆಪಿಯ ಕೈಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ಶೇಕಡಾ 85 ರಷ್ಟು ಜನರಿಗೆ ಇವಿಎಂ ಮೇಲೆ ಭರವಸೆ
ಯೋಜನೆ ಮತ್ತು ಅಂಕಿಅಂಶಗಳ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರವು ರಾಜ್ಯದಾದ್ಯಂತ ಮತದಾರರ ಜ್ಞಾನ, ವರ್ತನೆ ಮತ್ತು ಅಭ್ಯಾಸ (KAP) ಕುರಿತು ವಿಸ್ತೃತ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆಯ ಫಲಿತಾಂಶದ ಪ್ರಕಾರ, ರಾಜ್ಯದ ಸುಮಾರು ಶೇ. 85 ರಷ್ಟು ಮತದಾರರು ಇವಿಎಂ ಕಾರ್ಯನಿರ್ವಹಣೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆ ನಡೆದ 2024 ರ ಲೋಕಸಭಾ ಚುನಾವಣೆಯು ಸಂಪೂರ್ಣ ಮುಕ್ತ ಮತ್ತು ನ್ಯಾಯಯುತವಾಗಿ ನಡೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಇವಿಎಂ ವಿರೋಧಿ ನಿಲುವಿಗೆ ತದ್ವಿರುದ್ಧವಾದ ಜನಾಭಿಪ್ರಾಯವಾಗಿದೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ವಾಗ್ದಾಳಿ
ಸರ್ಕಾರಿ ಸ್ವಾಮ್ಯದ ಪ್ರಾಧಿಕಾರವೇ ಈ ಅಂಕಿಅಂಶಗಳನ್ನು ಹೊರಹಾಕುತ್ತಿದ್ದಂತೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರ ವೋಟ್ ಚೋರಿ ಸುಳ್ಳು ಕಥೆ ಮತ್ತೊಮ್ಮೆ ಬೆತ್ತಲಾಗಿದೆ. ಭಾರತದಲ್ಲಿ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯುತ್ತವೆ ಎಂದು ಜನರೇ ಒಪ್ಪಿಕೊಂಡಿದ್ದಾರೆ. ತಮ್ಮ ಸೋಲನ್ನು ಒಪ್ಪಿಕೊಳ್ಳಲಾಗದೆ ಚುನಾವಣಾ ಆಯೋಗದ ಮೇಲೆ ಗೂಬೆ ಕೂಡಿಸುತ್ತಿದ್ದ ರಾಹುಲ್ ಗಾಂಧಿ ಮತ್ತು ಅವರ ತಂಡಕ್ಕೆ ಇದೊಂದು ನೇರವಾದ ಏಟು ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ನ ಇವಿಎಂ ವಿರೋಧಿ ಅಭಿಯಾನ ಜನಮನ್ನಣೆ ಗಳಿಸಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಮೀಕ್ಷೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ
ಇತ್ತ ಸಮೀಕ್ಷೆಯ ವರದಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಸಮೀಕ್ಷೆಯ ಸಿಂಧುತ್ವವನ್ನೇ ಪ್ರಶ್ನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಮೀಕ್ಷೆಗೆ ರಾಜ್ಯ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ ಅಥವಾ ಆದೇಶಿಸಿಲ್ಲ. ಪ್ರಧಾನ ಮಂತ್ರಿಗಳ ಕಚೇರಿಯ (PMO) ಜೊತೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬರ ಎನ್‌ಜಿಒ ಈ ಸಮೀಕ್ಷೆಯನ್ನು ನಡೆಸಿದೆ. ಹೀಗಾಗಿ ಅವರಿಂದ ನೀವು ಎಂತಹ ವರದಿಯನ್ನು ನಿರೀಕ್ಷಿಸಲು ಸಾಧ್ಯ? ಎಂದು ಮರುಪ್ರಶ್ನೆ ಹಾಕುವ ಮೂಲಕ ವರದಿಯನ್ನು ತಳ್ಳಿಹಾಕಿದ್ದಾರೆ.
102 ಕ್ಷೇತ್ರಗಳಲ್ಲಿ ನಡೆದ ಸಮೀಕ್ಷೆ
ಈ ಸಮೀಕ್ಷೆಯನ್ನು ಸಣ್ಣ ಮಟ್ಟದಲ್ಲಿ ನಡೆಸಲಾಗಿಲ್ಲ ಎಂಬುದು ಗಮನಾರ್ಹ. ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಆಡಳಿತ ವಿಭಾಗಗಳನ್ನು ಒಳಗೊಂಡಂತೆ ರಾಜ್ಯದ ಒಟ್ಟು 102 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸಮೀಕ್ಷೆ ನಡೆದಿದೆ. ಸುಮಾರು 5,100 ಮತದಾರರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿ ಹೇಳಿದೆ.
ಕರ್ನಾಟಕದ ಈ ಸಮೀಕ್ಷಾ ವರದಿಯು ಮುಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಮತ್ತಷ್ಟು ವಾಕ್ಸಮರಕ್ಕೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ.








