ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12 ಅಂತಿಮ ಘಟ್ಟದತ್ತ ಮುಖ ಮಾಡುತ್ತಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯೊಳಗಿನ ಆಟದ ಕಾವು ಹೆಚ್ಚಾಗಿದ್ದರೆ, ಹೊರಗಡೆ ವೀಕ್ಷಕರ ಚರ್ಚೆಯೂ ಜೋರಾಗಿದೆ. ಆದರೆ ಈ ವಾರಾಂತ್ಯದ ಪಂಚಾಯಿತಿಯ ಪ್ರೋಮೋ ಒಂದು ಬಿಡುಗಡೆಯಾಗಿದ್ದು, ಇದು ವೀಕ್ಷಕರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿ ರಕ್ಷಿತಾ ಶೆಟ್ಟಿ ಕುರಿತು ಬಳಸಿದ ಒಂದು ನಿರ್ದಿಷ್ಟ ಪದದ ಬಳಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಫಿನಾಲೆ ರೇಸ್ನಲ್ಲಿ ರಕ್ಷಿತಾ ಶೆಟ್ಟಿ
ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಯಾಗಿರುವ ರಕ್ಷಿತಾ ಶೆಟ್ಟಿ ಆರಂಭದಿಂದಲೂ ತಮ್ಮದೇ ಆದ ವಿಭಿನ್ನ ಆಟದ ಶೈಲಿಯ ಮೂಲಕ ಗಮನ ಸೆಳೆದವರು. ಭಾಷೆಯ ಮೇಲಿನ ಹಿಡಿತ ಕೊಂಚ ಕಡಿಮೆಯಿದ್ದರೂ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ತಡಕಾಡಿದರೂ, ಅವರ ಪ್ರಾಮಾಣಿಕತೆ ಮತ್ತು ನೇರ ನಡೆಗೆ ಕನ್ನಡಿಗರು ಮನಸೋತಿದ್ದಾರೆ. ಪರಿಣಾಮವಾಗಿ, ರಕ್ಷಿತಾ ಶೆಟ್ಟಿ ಅವರು ಫಿನಾಲೆಗೆ ಅತ್ಯಂತ ಸಮೀಪದಲ್ಲಿದ್ದಾರೆ. ಮನೆಯ ಸದಸ್ಯರು ರಕ್ಷಿತಾ ಅವರಿಗೆ ಆಟ ಅರ್ಥವಾಗುವುದಿಲ್ಲ ಅಥವಾ ಮಾತನಾಡಲು ಬರುವುದಿಲ್ಲ ಎಂದು ಹೀಯಾಳಿಸಿದಾಗಲೆಲ್ಲಾ ವೀಕ್ಷಕರು ರಕ್ಷಿತಾ ಪರ ನಿಂತಿದ್ದಾರೆ. ಆದರೆ ಈಗ ಸ್ವತಃ ನಿರೂಪಕರೇ ರಕ್ಷಿತಾ ಅವರನ್ನು ತಮಾಷೆ ಮಾಡಿದಂತಿದೆ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸುದೀಪ್ ಬಾಯಲ್ಲಿ ಉರಿಯುತ್ತೆ ಎಂಬ ಪದ
ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ವೀಕೆಂಡ್ ಎಪಿಸೋಡ್ನ ಪ್ರೋಮೋದಲ್ಲಿ, ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರ ಮುಖಭಾವ ಅಥವಾ ಪ್ರತಿಕ್ರಿಯೆಯನ್ನು ಉದ್ದೇಶಿಸಿ ಉರಿಯುತ್ತಾ ಇದೆಯಾ ಎಂಬರ್ಥದ ಪದವನ್ನು ಬಳಸಿದ್ದಾರೆ. ಸಾಮಾನ್ಯವಾಗಿ ಮನೆಯ ಸದಸ್ಯರ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಬೇಕಾದ ನಿರೂಪಕರೇ, ಸ್ಪರ್ಧಿಯೊಬ್ಬರ ಬಗ್ಗೆ ಇಂತಹ ಆಡುಭಾಷೆಯ ಅಥವಾ ವ್ಯಂಗ್ಯದ ಪದವನ್ನು ಬಳಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ. ಈ ಮಾತು ರಕ್ಷಿತಾ ಅವರ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಮಾಡುವಂತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ವೀಕ್ಷಕರ ಅಸಮಾಧಾನ ಏಕೆ
ಈ ಪ್ರೋಮೋ ನೋಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಸುಮತಿ ಕೆಮ್ಮಣ್ಣು ಎಂಬ ವೀಕ್ಷಕರು ಕಮೆಂಟ್ ಮಾಡಿ, ರಕ್ಷಿತಾ ಎಷ್ಟೇ ದಡ್ಡ ಪ್ರೇಮಿಯಂತೆ ಇದ್ದರೂ ಅಥವಾ ಆಟದ ಬಗ್ಗೆ ಗೊಂದಲವಿದ್ದರೂ, ಸುದೀಪ್ ಅವರ ಬಾಯಲ್ಲಿ ಅಂತಹ ಪದ ಬರಬಾರದಿತ್ತು. ಇದು ನೇರವಾಗಿ ಅವರ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಮಾಡುವ ಮಾತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ವೀಕ್ಷಕರಾದ ಮೋಹನ್ ಕುಮಾರ್, ಉರಿಯುತ್ತೆ ಅಂತ ಸುದೀಪ್ ಹೇಳೋದು ಸರಿ ಇಲ್ಲ. ಈ ಸೀಸನ್ನಲ್ಲಿ ಸುದೀಪ್ ಅವರ ಯಾವ ಪಂಚಾಯಿತಿಯೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಅವರು ಪಕ್ಷಪಾತಿಯಂತೆ ಕಾಣುತ್ತಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ.
ಧ್ರುವಂತ್ ಮತ್ತು ಮಾಳು ಪ್ರಕರಣದ ಉಲ್ಲೇಖ
ವಿಶೇಷವೆಂದರೆ, ಇದೇ ಸೀಸನ್ನಲ್ಲಿ ಹಿಂದೆ ಸ್ಪರ್ಧಿ ಧ್ರುವಂತ್ ಅವರು ರಕ್ಷಿತಾ ವಿರುದ್ಧ ಮಾತನಾಡುವಾಗ ಉರೀತಾ ಇದೆಯಾ ಎಂದು ಕೇಳಿದ್ದರು. ಆಗ ಸಹಸ್ಪರ್ಧಿ ಮಾಳು ಈ ಪದ ಬಳಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಸ್ವತಃ ಸುದೀಪ್ ಅವರೇ ವಾರಾಂತ್ಯದ ಸಂಚಿಕೆಯಲ್ಲಿ ಭಾಷಾ ಪ್ರಯೋಗ ಮತ್ತು ಪದಗಳ ಆಯ್ಕೆ ಬಗ್ಗೆ ಸ್ಪರ್ಧಿಗಳಿಗೆ ಸುದೀರ್ಘ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಈಗ ಅದೇ ಪದವನ್ನು ಸುದೀಪ್ ಅವರೇ ಬಳಸಿರುವುದು ವಿಪರ್ಯಾಸ ಮತ್ತು ವೀಕ್ಷಕರ ಅಚ್ಚರಿಗೆ ಕಾರಣವಾಗಿದೆ.
ಕಿಚ್ಚನ ಅಭಿಮಾನಿಗಳ ಸಮರ್ಥನೆ
ಒಂದೆಡೆ ಸುದೀಪ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಕಿಚ್ಚನ ಅಭಿಮಾನಿಗಳು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಸುದೀಪ್ ಅವರು ಈ ಮಾತನ್ನು ಗಂಭೀರವಾಗಿ ಹೇಳಿಲ್ಲ, ಬದಲಾಗಿ ತಮಾಷೆಯಾಗಿ ಹೇಳಿದ್ದಾರೆ. ಒಂದು ಪದಕ್ಕೆ ಸಂದರ್ಭಕ್ಕೆ ತಕ್ಕಂತೆ ನೂರಾರು ಅರ್ಥಗಳಿರುತ್ತವೆ. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಮುಖ್ಯ. ಸುದೀಪ್ ಅವರು ಕೇವಲ ಮನರಂಜನೆಯ ಭಾಗವಾಗಿ ರಕ್ಷಿತಾ ಕಾಲೆಳೆದಿದ್ದಾರೆ ಹೊರತು, ಅವರನ್ನು ನೋಯಿಸುವ ಉದ್ದೇಶವಿಲ್ಲ ಎಂದು ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ, ಬಿಗ್ಬಾಸ್ ಮನೆಯ ಆಟ ಅಂತಿಮ ಹಂತಕ್ಕೆ ತಲುಪುತ್ತಿರುವಾಗ ನಿರೂಪಕರ ಒಂದು ಮಾತು ಇಷ್ಟೊಂದು ಕೋಲಾಹಲಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಪೂರ್ಣ ಸಂಚಿಕೆ ಪ್ರಸಾರವಾದ ಬಳಿಕವಷ್ಟೇ ಈ ಮಾತು ಯಾವ ಸಂದರ್ಭದಲ್ಲಿ ಬಂತು ಎಂಬುದು ತಿಳಿಯಲಿದೆ.








