ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಸಚಿವ ಕೃಷ್ಣ ಬೈರೇಗೌಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಜನವರಿ 6ರಂದು ಸಿದ್ದರಾಮಯ್ಯ ಅವರು ಕರ್ನಾಟಕದ ಇತಿಹಾಸದಲ್ಲೇ ಸುದೀರ್ಘ ಅವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆ ಸರಿಗಟ್ಟುತ್ತಿರುವ ಮಹತ್ವದ ಸಂದರ್ಭದಲ್ಲಿ, ಕೃಷ್ಣ ಬೈರೇಗೌಡ ಅವರು ಸಿಎಂ ಅವರನ್ನು ಮುಕ್ತವಾಗಿ ಹಾಡಿ ಹೊಗಳಿದ್ದಾರೆ.
ಸಿದ್ದರಾಮಯ್ಯ ಅವರಂತಹ ನಾಯಕತ್ವಕ್ಕೆ ಪರ್ಯಾಯ ಕಂಡುಕೊಳ್ಳುವುದು ಬಹಳ ಕಷ್ಟಸಾಧ್ಯ ಎಂದು ಹೇಳಿದ ಅವರು, ಯಶಸ್ವಿ ಆಡಳಿತಕ್ಕೆ ಸಿದ್ದರಾಮಯ್ಯ ಸ್ಪಷ್ಟ ಪ್ರತಿಬಿಂಬ ಎಂದಿದ್ದಾರೆ. ರಾಜ್ಯ ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಸಿಎಂ, ನೀತಿ ನಿರ್ಣಯಗಳಲ್ಲಿ ಗಟ್ಟಿತನ ತೋರಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಇನ್ನು, ಜನಮನ್ನಣೆ ಪಡೆದ ನಾಯಕತ್ವ, ಆಡಳಿತದ ಮೇಲಿನ ಹಿಡಿತ ಮತ್ತು ಸ್ಪಷ್ಟ ದೃಷ್ಟಿಕೋನ ಇವೆಲ್ಲವೂ ಸಿದ್ದರಾಮಯ್ಯ ಅವರನ್ನು ವಿಭಿನ್ನವಾಗಿಸುತ್ತವೆ ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ನ್ಯಾಯ, ಬಡವರ ಪರ ನಿಲುವು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಬದ್ಧತೆ ಅವರ ಆಡಳಿತದ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಸಚಿವರ ಈ ಹೇಳಿಕೆ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬಲ ತುಂಬುವ ಸಂದೇಶವಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.








