ಸ್ಥಗಿತಗೊಂಡಿದ್ದ ಪಡಿತರ ಚೀಟಿ (ರೇಷನ್ ಕಾರ್ಡ್) ತಿದ್ದುಪಡಿ ಪ್ರಕ್ರಿಯೆ ಇದೀಗ ರಾಜ್ಯಾದ್ಯಂತ ಮತ್ತೆ ಆರಂಭವಾಗಿದೆ. ಬಹು ದಿನಗಳಿಂದ ಕಾಯುತ್ತಿದ್ದ ಸಾರ್ವಜನಿಕರಿಗೆ ಇದೊಂದು ಮಹತ್ವದ ಸೌಲಭ್ಯವಾಗಿದ್ದು, ಹೆಸರು ತಿದ್ದುಪಡಿ, ಸೇರ್ಪಡೆ ಹಾಗೂ ಕುಟುಂಬದ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳಲು ಇದೀಗ ಅವಕಾಶ ಕಲ್ಪಿಸಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾರ್ಗಸೂಚಿಯಂತೆ, ತಿದ್ದುಪಡಿ ಪ್ರಕ್ರಿಯೆಗೆ ನಿರ್ದಿಷ್ಟ ದಾಖಲೆಗಳು ಕಡ್ಡಾಯವಾಗಿವೆ.
ಹೆಸರುಗಳ ತಿದ್ದುಪಡಿಗೆ ಹಾಲಿ ಇರುವ ಪಡಿತರ ಚೀಟಿ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಸಲ್ಲಿಸಬೇಕು.
ಹೆಸರು ಸೇರ್ಪಡೆಗೆ (6 ವರ್ಷ ಮೇಲ್ಪಟ್ಟವರಿಗೆ):
ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಮಕ್ಕಳ ಹೆಸರು ಸೇರ್ಪಡೆಗೆ (6 ವರ್ಷದೊಳಗಿನವರಿಗೆ):
ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್ ನೀಡಬೇಕು.
ಪತ್ನಿಯ ಹೆಸರು ಸೇರ್ಪಡೆಗೆ:
ಮದುವೆ ಆಮಂತ್ರಣ ಪತ್ರಿಕೆ ಅಥವಾ ವಿವಾಹ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಅಧಿಕೃತ ದಾಖಲೆಗಳಿಲ್ಲದೆ ಯಾವುದೇ ತಿದ್ದುಪಡಿ ಅಥವಾ ಸೇರ್ಪಡೆ ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಅರ್ಹ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಪೂರ್ಣವಾಗಿ ಸಿದ್ಧಪಡಿಸಿಕೊಂಡು, ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ಸೇವಾ ಕೇಂದ್ರಗಳ ಮೂಲಕ ತಿದ್ದುಪಡಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.








