ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ದೇವರಾಜು ಅರಸು ಅವರ ದಾಖಲೆ ಮುರಿಯುವ ಮಾತುಗಳನ್ನಾಡುವ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನಗರದ ಜೆಪಿ ಭವನದಲ್ಲಿರುವ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ, ಅಧಿಕಾರಿಗಳ ಕಾರ್ಯವೈಖರಿ ಮತ್ತು ಇತ್ತೀಚಿನ ಬೆಳವಣಿಗೆಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲವಾದರು.
ದೇವರಾಜು ಅರಸು ಎಲ್ಲಿ? ಇವರೆಲ್ಲಿ?
ಮುಖ್ಯಮಂತ್ರಿಗಳು ತಾವು ದೀರ್ಘಕಾಲ ಆಡಳಿತ ನಡೆಸಿ ದೇವರಾಜು ಅರಸು ಅವರ ದಾಖಲೆ ಮುರಿಯುತ್ತೇನೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅರಸು ಅವರು ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದ್ದರೆ, ಇಂದಿನ ಸರ್ಕಾರ ಕೆಟ್ಟ ಆಡಳಿತಕ್ಕೆ ನಿದರ್ಶನವಾಗಿದೆ. ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಇವರ ಆಡಳಿತದ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎನಿಸುತ್ತದೆ. ಇವರ ದುರಾಡಳಿತದಿಂದಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗುವುದು ಮರೀಚಿಕೆಯಾಗಲಿದ್ದು, ಸಿದ್ದರಾಮಯ್ಯನವರೇ ಆ ಪಕ್ಷದ ಕೊನೆಯ ಸಿಎಂ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರಾಳ ಆಡಳಿತದ ಇತಿಹಾಸ
ಕಳೆದ ಎರಡೂವರೆ ವರ್ಷಗಳ ಆಡಳಿತ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಅಧ್ಯಾಯವಾಗಿ ದಾಖಲಾಗಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಕೊಲೆ, ಸುಲಿಗೆ, ಡ್ರಗ್ಸ್ ಮಾಫಿಯಾ ಹಾಗೂ ಮರ್ಯಾದಾ ಹತ್ಯೆಯಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇವುಗಳನ್ನು ಹತ್ತಿಕ್ಕಲು ಸಾಧ್ಯವಾಗದ ಮುಖ್ಯಮಂತ್ರಿಗಳು ಕೇವಲ ದಾಖಲೆಗಾಗಿ ಕುರ್ಚಿ ಹಿಡಿದು ಕುಳಿತಂತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಅಧಿಕಾರಿಗಳು ಗುಲಾಮರಾಗಿದ್ದಾರೆ
ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಇವರ ಆಡಳಿತದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಕೆಲಸ ಮಾಡಲು ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಎಷ್ಟರಮಟ್ಟಿಗೆ ವ್ಯವಸ್ಥೆ ಕೆಟ್ಟು ಹೋಗಿದೆಯೆಂದರೆ, ಇವರ ಸರ್ಕಾರದಲ್ಲಿ ಬ್ಯಾಟರಿ ಹಾಕಿ ಹುಡುಕಿದರೂ ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಸಿಗುವುದಿಲ್ಲ ಎಂದು ಕಟುವಾಗಿ ನುಡಿದರು.
ನಕಲಿ ಶ್ಯಾಮರಂತೆ ವರ್ತನೆ
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಇವರಿಬ್ಬರೂ ನಕಲಿ ಶ್ಯಾಮರಂತೆ ವರ್ತಿಸುತ್ತಿದ್ದಾರೆ. ಗೃಹ ಸಚಿವರಿಗೆ ಅಧಿಕಾರದ ಗತ್ತು ಗೊತ್ತಿಲ್ಲ, ಕೇವಲ ನಾಜೂಕಯ್ಯನ ರೀತಿ ಮಾತನಾಡುವುದನ್ನು ಕಲಿತಿದ್ದಾರೆ. ರಾಜ್ಯದಲ್ಲಿ ಯಾವುದೇ ಗಂಭೀರ ಪ್ರಕರಣ ನಡೆದರೂ ತಕ್ಷಣ ಒಂದು ಎಸ್ಐಟಿ (SIT) ರಚಿಸಿ ಕೈತೊಳೆದುಕೊಳ್ಳುವುದೇ ಇವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.
ಓಂ ಶಕ್ತಿ ಭಕ್ತರ ಮೇಲಿನ ದಾಳಿಗೆ ಖಂಡನೆ
ಬೆಂಗಳೂರಿನ ಜೆಜೆ ನಗರದಲ್ಲಿ ಓಂ ಶಕ್ತಿ ಮಾಲೆ ಧರಿಸಿ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯನ್ನು ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು. ದೈವ ಭಕ್ತಿಯಿಂದ ಯಾತ್ರೆ ಹೊರಟ ಹೆಣ್ಣು ಮಕ್ಕಳ ಮೇಲೆ ಕಲ್ಲು ಎಸೆಯುವ ಮಟ್ಟಿಗೆ ಕಿಡಿಗೇಡಿಗಳಿಗೆ ಧೈರ್ಯ ಬಂದಿದೆ ಎಂದರೆ ರಾಜ್ಯ ಎಲ್ಲಿಗೆ ಬಂದು ನಿಂತಿದೆ ಎಂಬುದು ಅರ್ಥವಾಗುತ್ತದೆ. ಈ ಸರ್ಕಾರ ಪರೋಕ್ಷವಾಗಿ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವಂತಿದೆ. ಕಲ್ಲು ತೂರಿದ ಪುಂಡರ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಂತಿಮವಾಗಿ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವೇ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.








