ಮೈಸೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ದೀರ್ಘಕಾಲದ ಆಡಳಿತದ ದಾಖಲೆಯನ್ನು ಸರಿಗಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಮತ್ತೊಂದು ಮಹತ್ವದ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ತಾವು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ವಿಶ್ವಾಸವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದ ಸಾಧನೆ, ದಾಖಲೆ ಹಾಗೂ ಮುಂದಿನ ಅವಧಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು.
ಅರಸು ದಾಖಲೆ ಮುರಿಯುವುದು ನನ್ನ ಗುರಿಯಾಗಿರಲಿಲ್ಲ
ನಾನು ರಾಜಕೀಯಕ್ಕೆ ಬಂದಿದ್ದು ಯಾವುದೇ ದಾಖಲೆಗಳನ್ನು ಮುರಿಯುವುದಕ್ಕಲ್ಲ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ನಡೆಸಿದ್ದರು ಎಂಬ ನಿಖರ ಮಾಹಿತಿಯೂ ನನಗೆ ತಿಳಿದಿರಲಿಲ್ಲ. ಆದರೆ, ಜನರ ಆಶೀರ್ವಾದ ಮತ್ತು ಬೆಂಬಲದಿಂದಾಗಿ ಕಾಕತಾಳೀಯವಾಗಿ ಈ ದಾಖಲೆ ನಿರ್ಮಾಣವಾಗಿದೆ. ಮೈಸೂರಿನವರೇ ಆದ ಅರಸು ಅವರ ದಾಖಲೆಯನ್ನು ಮೈಸೂರಿನವನೇ ಆದ ನಾನು ಸರಿಗಟ್ಟುವಂತಾದದ್ದು ಒಂದು ವಿಶೇಷ ಎಂದು ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು. ಅರಸು ಅವರು 1972ರಿಂದ 80ರವರೆಗೆ ಸತತವಾಗಿ ಆಡಳಿತ ನಡೆಸಿದ್ದರೆ, ನಾನು ಎರಡು ಭಿನ್ನ ಅವಧಿಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ್ದೇನೆ ಎಂದು ಸ್ಮರಿಸಿದರು.
ಪೂರ್ಣಾವಧಿ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ
ರಾಜ್ಯದಲ್ಲಿ ಆಗಾಗ ಕೇಳಿಬರುವ ಮುಖ್ಯಮಂತ್ರಿ ಬದಲಾವಣೆ ಅಥವಾ ಅಧಿಕಾರ ಹಂಚಿಕೆಯ ಕುರಿತಾದ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಸಂಪೂರ್ಣ ವಿಶ್ವಾಸ ನನಗಿದೆ. ಆದರೆ, ಈ ಕುರಿತು ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದರು. ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಸಮಾನತೆ ವಿರುದ್ಧದ ಹೋರಾಟವೇ ನನ್ನ ಉಸಿರು
ತಮ್ಮ ರಾಜಕೀಯ ತತ್ವದ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದೆ. ಎಲ್ಲಿಯವರೆಗೆ ಅಸಮಾನತೆ ತೊಲಗುವುದಿಲ್ಲವೋ, ಅಲ್ಲಿಯವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ. ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವುದೇ ರಾಜಕಾರಣದ ಮೂಲ ಉದ್ದೇಶ. ಕೇವಲ ಶಾಸಕನಾಗಬೇಕೆಂಬ ಆಸೆಯೊಂದಿಗೆ ಬಂದ ನಾನು, ಇಂದು ಮಂತ್ರಿ, ಉಪಮುಖ್ಯಮಂತ್ರಿ, ವಿಪಕ್ಷ ನಾಯಕ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ನನಗೆ ತೃಪ್ತಿ ತಂದಿದೆ ಎಂದು ಭಾವುಕರಾದರು.
ಮುಂಬರುವ ಬಜೆಟ್ ನಲ್ಲಿ ವಿಶೇಷ ಯೋಜನೆಗಳಿವೆಯೇ ಎಂಬ ಪ್ರಶ್ನೆಗೆ, ಬಜೆಟ್ ಮಂಡನೆಯವರೆಗೂ ಕಾದು ನೋಡಿ ಎಂದು ಕುತೂಹಲ ಕಾಯ್ದಿರಿಸಿದರು. ಇನ್ನು ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸುತ್ತೇನೆ. ಈಗಾಗಲೇ ತನಿಖೆ ಚುರುಕುಗೊಂಡಿದ್ದು, ಆರೋಪಿಗಳ ಬಂಧನವಾಗಿದೆ. ಆದರೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಮಾತನಾಡದೆ, ಕೇವಲ ರಾಜಕೀಯ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದರು.








