ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಾ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅತ್ಯುನ್ನತ ಮಟ್ಟದ ಭದ್ರತೆಯ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಯಾವುದೆ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ, ಕೇವಲ ಒಂದು ಖಾಸಗಿ ಸಂಘಟನೆಯ ಮುಖ್ಯಸ್ಥರಾಗಿರುವ ಮೋಹನ್ ಭಾಗವತ್ ಅವರಿಗೆ ದೇಶದ ಗೃಹ ಸಚಿವರು ಅಥವಾ ವಿದೇಶಾಂಗ ಸಚಿವರಿಗೆ ನೀಡುವಂತಹ ಸುಧಾರಿತ ಭದ್ರತಾ ಸಂಪರ್ಕ ರಕ್ಷಣೆ (Advanced Security Liaison – ASL) ನೀಡುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಈ ಐಷಾರಾಮಿ ಭದ್ರತೆಯ ಹಿಂದಿರುವ ಔಚಿತ್ಯವನ್ನು ಪ್ರಶ್ನಿಸಿ ಪ್ರಮುಖ ಅಂಶಗಳನ್ನು ಮುಂದಿಟ್ಟಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಮುಖ ಪ್ರಶ್ನೆಗಳು ಮತ್ತು ವಾದಗಳು ಈ ಕೆಳಗಿನಂತಿವೆ:
ಸಾಂವಿಧಾನಿಕ ಹುದ್ದೆಯಿಲ್ಲದಿದ್ದರೂ ವಿವಿಐಪಿ ಭದ್ರತೆ ಏಕೆ? ಮೋಹನ್ ಭಾಗವತ್ ಅವರು ಜನರಿಂದ ಆಯ್ಕೆಯಾದ ಸಾರ್ವಜನಿಕ ಪ್ರತಿನಿಧಿಯಲ್ಲ. ಅವರು ಸರ್ಕಾರಿ ಸೇವಕರೂ ಅಲ್ಲ ಅಥವಾ ದೇಶದ ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ. ಹೀಗಿರುವಾಗ, ಕೇವಲ ಒಂದು ಎನ್‌ಜಿಒ ಅಥವಾ ವ್ಯಕ್ತಿಗಳ ಸಂಘಟನೆಯ ಮುಖ್ಯಸ್ಥರಾಗಿರುವ ಅವರಿಗೆ ಡಜನ್‌ಗಟ್ಟಲೆ ಕಮಾಂಡೋಗಳು ಮತ್ತು 30 ಕಾರುಗಳ ಬೆಂಗಾವಲಿನ ಅಗತ್ಯವೇನಿದೆ ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ತೆರಿಗೆದಾರರ ಹಣದ ಪೋಲು
ಸಾಮಾನ್ಯವಾಗಿ ಕಾರ್ಪೊರೇಟ್‌ಗಳು ಅಥವಾ ಖಾಸಗಿ ವಿವಿಐಪಿಗಳು ಸರ್ಕಾರದಿಂದ ಭದ್ರತೆ ಪಡೆದರೆ, ಅದಕ್ಕೆ ತಗಲುವ ವೆಚ್ಚವನ್ನು ಅವರು ಸರ್ಕಾರಕ್ಕೆ ಮರುಪಾವತಿಸಬೇಕೆಂಬ ನಿಯಮವಿದೆ. ಆದರೆ, ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ನೀಡಲಾಗಿರುವ ಈ ಬೃಹತ್ ಭದ್ರತಾ ವ್ಯವಸ್ಥೆಗಾಗಿ ಖರ್ಚಾಗುತ್ತಿರುವ ತೆರಿಗೆದಾರರ ಹಣವನ್ನು ಆರ್‌ಎಸ್‌ಎಸ್ ಮರುಪಾವತಿ ಮಾಡುತ್ತಿದೆಯೇ? ಎಂದು ಸಚಿವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪಾರದರ್ಶಕತೆ ಇಲ್ಲದ ಸಂಘಟನೆ
ಆರ್‌ಎಸ್‌ಎಸ್ ಕಾರ್ಯವೈಖರಿಯ ಬಗ್ಗೆಯೂ ಟೀಕಿಸಿರುವ ಖರ್ಗೆ, ಈ ಸಂಘಟನೆಯು ಪಾರದರ್ಶಕತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ತೆರಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸೇರಿದಂತೆ ಸಾಂವಿಧಾನಿಕ ವಿರೋಧಿ ಚಟುವಟಿಕೆಗಳಲ್ಲಿ ಆರ್‌ಎಸ್‌ಎಸ್ ಭಾಗಿಯಾಗಿದೆ ಎನ್ನುವುದು ವಾಸ್ತವ. ಇಂತಹ ಸಂಸ್ಥೆಯ ಮುಖ್ಯಸ್ಥರಿಗೆ ದೇಶದ ಪ್ರಮುಖ ಸಚಿವರಿಗೆ ಸಿಗುವಂತಹ ಶಿಷ್ಟಾಚಾರದ ಭದ್ರತೆ ನೀಡುವುದು ಎಷ್ಟು ಸರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಯಂ ಘೋಷಿತ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥರ ಭದ್ರತೆಗಾಗಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಿಯಾಂಕ್ ಖರ್ಗೆ ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ಗೃಹ ಸಚಿವಾಲಯ ಉತ್ತರಿಸಬೇಕೆಂದು ಒತ್ತಾಯಿಸಿದ್ದಾರೆ.








