ಮಾಗಡಿ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ನಾಯಕತ್ವದ ಕುರಿತಾದ ಚರ್ಚೆಗಳು ಮುಂದುವರಿಯುತ್ತಿರುವ ಬೆನ್ನಲ್ಲೇ, ಮಾಗಡಿ ಶಾಸಕ ಎಚ್‌ಸಿ ಬಾಲಕೃಷ್ಣ ಅವರು ಮಹತ್ವದ ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಅತ್ಯಂತ ಅವಶ್ಯಕವಾಗಿದ್ದು, ಮುಂದಿನ ಚುನಾವಣೆಯೂ ಅವರ ಸಮರ್ಥ ಮಾರ್ಗದರ್ಶನದಲ್ಲೇ ನಡೆಯಬೇಕು ಎಂದು ಬಾಲಕೃಷ್ಣ ಪ್ರತಿಪಾದಿಸಿದ್ದಾರೆ.
ಈ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯಬೇಕು ಎಂಬ ಇಂಗಿತವನ್ನು ಶಾಸಕರು ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಅಂಗಳದಲ್ಲಿ ಚೆಂಡು, ಶಾಸಕರಿಗಿಲ್ಲ ಅಧಿಕಾರ
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ವಿಚಾರವಾಗಿ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಮುಖ್ಯಮಂತ್ರಿ ಬದಲಾವಣೆಯ ನಿರ್ಧಾರ ಸಂಪೂರ್ಣವಾಗಿ ಕಾಂಗ್ರೆಸ್ ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಯನ್ನು ಬದಲಾಯಿಸುವ ಅಥವಾ ಆಯ್ಕೆ ಮಾಡುವ ಅಧಿಕಾರ ನನ್ನಗಾಗಲಿ ಅಥವಾ ಇತರೆ ಶಾಸಕರಿಗಾಗಲಿ ಇಲ್ಲ. ಸಿದ್ದರಾಮಯ್ಯನವರೇ ಮುಂದುವರಿಯಬೇಕೇ ಅಥವಾ ಡಿಕೆಶಿಗೆ ಅಧಿಕಾರ ಹಸ್ತಾಂತರಿಸಬೇಕೇ ಎಂಬುದು ದೆಹಲಿ ಮಟ್ಟದ ವರಿಷ್ಠರು ನಿರ್ಧರಿಸುವ ವಿಚಾರ ಎಂದು ಮಾರ್ಮಿಕವಾಗಿ ನುಡಿದರು. ಶೀಘ್ರದಲ್ಲೇ ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ಹೈಕಮಾಂಡ್ ಸಭೆಗೆ ಕರೆಯುವ ಸಾಧ್ಯತೆಯಿದೆ ಎಂಬ ಸುಳಿವನ್ನು ಸಹ ಅವರು ನೀಡಿದರು.
ಸಿದ್ದರಾಮಯ್ಯ ನಮ್ಮ ಮನೆಯ ಯಜಮಾನ
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇಂದು ಪಕ್ಷದ ಪ್ರಶ್ನಾತೀತ ನಾಯಕ ಹಾಗೂ ನಮ್ಮ ಮನೆಯ ಯಜಮಾನನಿದ್ದಂತೆ. ಕಾಂಗ್ರೆಸ್ ಸೇರಿದ ಬಳಿಕ ಪಕ್ಷ ಅವರಿಗೆ ಸಿಎಂ ಹಾಗೂ ವಿರೋಧ ಪಕ್ಷದ ನಾಯಕನಂತಹ ಉನ್ನತ ಸ್ಥಾನಮಾನಗಳನ್ನು ನೀಡಿದೆ. ಹೀಗಾಗಿ ಅಧಿಕಾರ ಹಸ್ತಾಂತರದ ಬಗ್ಗೆ ಇವತ್ತೇ ಆಗಬೇಕು, ನಾಳೆಯೇ ಆಗಬೇಕು ಎಂದು ಪಟ್ಟು ಹಿಡಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷ ಸಂಘಟನೆ ಮತ್ತು ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ವಿರುದ್ಧ ಕೆಂಡಾಮಂಡಲ
ಇದೇ ವೇಳೆ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಗೋಲಿಬಾರ್ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷದ ಕಾರ್ಯಕರ್ತರನ್ನ ನಾವೇ ಕೊಲ್ಲಲು ಸಾಧ್ಯವೇ? ಎಂದು ಪ್ರಶ್ನಿಸಿದ ಬಾಲಕೃಷ್ಣ, ಜನಾರ್ದನ ರೆಡ್ಡಿ ಕಡೆಯವರು ದೊಣ್ಣೆ, ಖಾರದ ಪುಡಿಯಂತಹ ವಸ್ತುಗಳನ್ನು ಹಿಡಿದು ಗಲಾಟೆಗೆ ಬಂದಾಗ ಸ್ವರಕ್ಷಣೆಗಾಗಿ ಗುಂಡು ಹಾರಿಸಿರಬಹುದು, ಈ ವೇಳೆ ದುರಾದೃಷ್ಟವಶಾತ್ ಅವಘಡ ಸಂಭವಿಸಿರಬಹುದು ಎಂದು ಸಮರ್ಥಿಸಿಕೊಂಡರು.
ಬಳ್ಳಾರಿಯಲ್ಲಿ ಇಷ್ಟು ದಿನ ಶಾಂತಿ ನೆಲೆಸಿತ್ತು, ಆದರೆ ಜನಾರ್ದನ ರೆಡ್ಡಿ ಅವರ ಪ್ರವೇಶದ ನಂತರವೇ ಗಲಭೆ ಮತ್ತು ಅಶಾಂತಿ ಸೃಷ್ಟಿಯಾಗಿದೆ. ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ಇಷ್ಟೆಲ್ಲಾ ಗಲಾಟೆ ಮಾಡುವ ಅಗತ್ಯವೇನಿತ್ತು? ಅವರೇ ಖುದ್ದಾಗಿ ಬಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಬಾಲಕೃಷ್ಣ ಗಂಭೀರ ಆರೋಪ ಮಾಡಿದರು. ತನಿಖೆ ನಡೆಯುತ್ತಿರುವಾಗ ರೆಡ್ಡಿ ಅವರು ಅಪಪ್ರಚಾರ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.








