ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿಯ ಹಗಲುಗನಸಿಗೆ ಮತ್ತು ಮುಖ್ಯಮಂತ್ರಿ ಬದಲಾವಣೆಯ ಕುರಿತಾದ ಎಲ್ಲಾ ಊಹಾಪೋಹಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೋಲಾರದಲ್ಲಿ ಖಡಕ್ ಆಗಿಯೇ ತೆರೆ ಎಳೆದಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನೂತನ ಮಸೀದಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ಮುಂದಿನ ರಾಜಕೀಯ ನಡೆಗಳ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.
ಧರ್ಮ ಮತ್ತು ದೇಶಪ್ರೇಮದ ಪಾಠ
ಬಿಜೆಪಿಯ ಹಿಂದುತ್ವದ ರಾಜಕಾರಣ ಮತ್ತು ಕೋಮು ಧ್ರುವೀಕರಣದ ತಂತ್ರಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದ ಜಮೀರ್ ಅಹ್ಮದ್, ಬಿಜೆಪಿಯವರಿಗೆ ಅಭಿವೃದ್ಧಿಗಿಂತ ಜಾತಿ ಮತ್ತು ಧರ್ಮವೇ ಮುಖ್ಯವಾಗಿದೆ ಎಂದು ಆರೋಪಿಸಿದರು. ಇಸ್ಲಾಂ ಧರ್ಮ ಎಂದಿಗೂ ಮನುಷ್ಯರ ನಡುವೆ ಜಾತಿ ಭೇದ ಮಾಡುವುದನ್ನು ಕಲಿಸಿಲ್ಲ. ಬದಲಿಗೆ ಸಾರೆ ಜಹಾನ್ ಸೆ ಅಚ್ಚಾ ಎಂದು ಒಟ್ಟಾಗಿ ಹಾಡುವುದನ್ನು ಮತ್ತು ಸಾಮಾಜಿಕ ಸಾಮರಸ್ಯವನ್ನು ನಮ್ಮ ಧರ್ಮ ಕಲಿಸಿಕೊಟ್ಟಿದೆ. ಸಮಾಜದಲ್ಲಿ ಜಾತಿ-ಧರ್ಮದ ವಿಷಬೀಜ ಬಿತ್ತುವುದನ್ನೇ ಸಾಧನೆ ಎಂದುಕೊಂಡಿರುವ ಬಿಜೆಪಿಗೆ ಹಿಂದೂಗಳೂ ಬೇಕಿಲ್ಲ, ಮುಸ್ಲಿಮರೂ ಬೇಕಿಲ್ಲ, ಅವರಿಗೆ ಕೇವಲ ಅಧಿಕಾರ ಬೇಕಿದೆ ಎಂದು ಕಿಡಿಕಾರಿದರು.
ಸರ್ಕಾರ ಪತನದ ಕ್ರಾಂತಿ ಮಾತು ಬರೀ ಬ್ರಾಂತಿ
ಕಾಂಗ್ರೆಸ್ ಸರ್ಕಾರ ನವೆಂಬರ್ ತಿಂಗಳಲ್ಲಿ ಪತನವಾಗಲಿದೆ ಎಂದು ಹೇಳಿಕೆ ನೀಡಿದ್ದ ವಿರೋಧ ಪಕ್ಷದ ನಾಯಕರನ್ನು ಸಚಿವರು ಲೇವಡಿ ಮಾಡಿದರು. ಅವರು ನವೆಂಬರ್ನಲ್ಲಿ ಕ್ರಾಂತಿ ಆಗುತ್ತದೆ ಎಂದಿದ್ದರು. ಆದರೆ ನಾನು ಆಗಲೇ ಹೇಳಿದ್ದೆ, ಯಾವ ಕ್ರಾಂತಿಯೂ ಆಗಲ್ಲ, ಅದು ಕೇವಲ ಅವರ ಬ್ರಾಂತಿಯಷ್ಟೇ ಎಂದು. ಸರ್ಕಾರ ಬೀಳುತ್ತದೆ ಎಂದು ಕಾಯುತ್ತಿದ್ದವರಿಗೆ ಕ್ರಾಂತಿಯ ಬದಲು ವಾಂತಿ-ಬೇದಿ ಆಗುತ್ತದೆ ಎಂದು ಅಂದೇ ಎಚ್ಚರಿಸಿದ್ದೆ. ಈಗ ನವೆಂಬರ್ ಡಿಸೆಂಬರ್ ಕಳೆದು ಸಂಕ್ರಾಂತಿ ಹಬ್ಬವೂ ಮುಗಿದಿದೆ. ಆದರೂ ಸರ್ಕಾರ ಸುಭದ್ರವಾಗಿದೆ. ಇನ್ನು ಮುಂದೆಯೂ ಅವರಿಗೆ ನಿರಾಸೆ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಿಎಂ ಬದಲಾವಣೆ ಚರ್ಚೆಗೆ ಜಮೀರ್ ಅಹ್ಮದ್ ಖಾನ್ ಪೂರ್ಣವಿರಾಮ ಇಟ್ಟಿದ್ದಾರೆ. ಪ್ರಸ್ತುತ ಹೈಕಮಾಂಡ್ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದು, 2028ರ ವರೆಗೂ ಅಂದರೆ ಸರ್ಕಾರದ ಅವಧಿ ಮುಗಿಯುವವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಡಿಕೆಶಿ ಮುಂದಿನ ಸಿಎಂ: ಅನುಮಾನವೇ ಬೇಡ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುರಿತು ಮಾತನಾಡಿದ ಜಮೀರ್, ಡಿಕೆಶಿ ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ. ಅವರನ್ನು ಬದಲಿಸಲು ಅಥವಾ ಕಡೆಗಣಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮುಗಿದ ನಂತರ ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮೆಲ್ಲರ ಬಯಕೆಯೂ ಹೌದು ಎಂದು ಹೇಳುವ ಮೂಲಕ ಒಕ್ಕಲಿಗ ಸಮುದಾಯ ಮತ್ತು ಡಿಕೆಶಿ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.
ಗ್ಯಾರಂಟಿಗಳೇ ನಮ್ಮ ಗೆಲುವಿನ ಅಸ್ತ್ರ
ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ ಸಚಿವರು, ಮುಂಬರುವ ಚುನಾವಣೆಗಳಲ್ಲಿ ನಾವು ಜನರ ಮುಂದೆ ಹೋಗಲು ಧರ್ಮದ ಮೊರೆ ಹೋಗುವುದಿಲ್ಲ. ಬದಲಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಹತ್ತಾರು ಭಾಗ್ಯಗಳೇ ನಮಗೆ ಶ್ರೀರಕ್ಷೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡೇ ಮತ ಕೇಳುತ್ತೇವೆ ಮತ್ತು ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.








