ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಾತಿನ ಸಮರ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೀಸ್ ಸಿಎಂ ಎಂದು ಲೇವಡಿ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಹತಾಶೆಯ ಪ್ರತೀಕ ಎಂದು ಜರೆದಿರುವ ಪ್ರದೀಪ್ ಈಶ್ವರ್, ಜೆಡಿಎಸ್ ನಾಯಕರ ಡ್ಯಾಡಿ ಈಸ್ ಹೋಮ್ ಎಂಬ ಪ್ರಚಾರದ ವಿರುದ್ಧವೂ ವ್ಯಂಗ್ಯದ ಬಾಣಗಳನ್ನು ಬಿಟ್ಟಿದ್ದಾರೆ.
ಸಿದ್ದರಾಮಯ್ಯ ಲೀಸ್ ಸಿಎಂ ಅಲ್ಲ, ಜನನಾಯಕ
ಮಾಧ್ಯಮಗಳೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ರಾಜ್ಯದ ಜವಾಬ್ದಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರೊಬ್ಬರು ಮುಖ್ಯಮಂತ್ರಿಯ ಬಗ್ಗೆ ಲೀಸ್ ಸಿಎಂ ಎನ್ನುವಂತಹ ಪದಬಳಕೆ ಮಾಡಿರುವುದು ಅವರ ಕೀಳುಮಟ್ಟದ ರಾಜಕೀಯ ಅಭಿರುಚಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಹಿಂದೆ ಸಿದ್ದರಾಮಯ್ಯ ಅವರ ಬೆನ್ನಿಗೆ ಹೇಗೆ ಚೂರಿ ಹಾಕಿದ್ದರು ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಅಂದು ಆದ ಅನ್ಯಾಯ ಮತ್ತು ಕುತಂತ್ರಗಳು ಬೇರೆ ಯಾರ ಮೇಲಾದರೂ ನಡೆದಿದ್ದರೆ, ಅವರ ರಾಜಕೀಯ ಜೀವನವೇ ಮಣ್ಣುಗೂಡಿ ಹೋಗುತ್ತಿತ್ತು. ಆದರೆ ಸಿದ್ದರಾಮಯ್ಯ ಛಲಬಿಡದ ಹೋರಾಟಗಾರ. ಅವರು ತಮ್ಮ ಬದ್ಧತೆ ಮತ್ತು ಹೋರಾಟದ ಮೂಲಕವೇ ಎದ್ದು ನಿಂತರು. ದೇವರಾಜ ಅರಸು ಅವರ ನಂತರ ರಾಜ್ಯ ಕಂಡ ಅತಿದೊಡ್ಡ ಹಿಂದುಳಿದ ವರ್ಗಗಳ (ಒಬಿಸಿ) ನಾಯಕನಾಗಿ ಸಿದ್ದರಾಮಯ್ಯ ಬೆಳೆದಿದ್ದಾರೆ. ಈ ಏಳಿಗೆಯನ್ನು ಸಹಿಸಲಾಗದ ಕುಮಾರಸ್ವಾಮಿ ಅವರು ಹೊಟ್ಟೆಕಿಚ್ಚಿನಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಡ್ಯಾಡಿ ಯಾರು? ಗೊಂದಲದಲ್ಲಿ ಜೆಡಿಎಸ್
ಜೆಡಿಎಸ್ ಪಕ್ಷದ ಯುವ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಡ್ಯಾಡಿ ಈಸ್ ಹೋಮ್ ಎಂಬ ಎಐ ಟೀಸರ್ ಬಗ್ಗೆ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು. ಆ ವಿಡಿಯೋದಲ್ಲಿ ಹೇಳುತ್ತಿರುವ ಡ್ಯಾಡಿ ಯಾರು ಎಂಬುದೇ ರಾಜ್ಯದ ಜನರಿಗೆ ದೊಡ್ಡ ಗೊಂದಲವಾಗಿದೆ. ಕುಮಾರಸ್ವಾಮಿ ಡ್ಯಾಡಿನಾ? ನಿಖಿಲ್ ಕುಮಾರಸ್ವಾಮಿ ಡ್ಯಾಡಿನಾ? ಅಥವಾ ದೇವೇಗೌಡರು ಮತ್ತೆ ಸಿಎಂ ರೇಸ್‌ಗೆ ಬರುತ್ತಿದ್ದಾರಾ? ಅಷ್ಟಕ್ಕೂ ಆ ಡ್ಯಾಡಿ ಮನೆಗೆ ಬಂದಿರುವುದು ಯಾರ ಜೊತೆ? ಕಾಂಗ್ರೆಸ್ ಜೊತೆನಾ ಅಥವಾ ಬಿಜೆಪಿ ಜೊತೆನಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. 2028ರಲ್ಲಿ ತಾವೇ ಸಿಎಂ ಆಗಬೇಕೆಂಬ ಹಗಲುಗನಸನ್ನು ಕಾಣುತ್ತಿರುವ ಕುಮಾರಸ್ವಾಮಿ, ಸದ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಟೀಕಿಸಿದರು.
ದೆಹಲಿಯಲ್ಲಿ ಕೈಕಟ್ಟಿ ನಿಂತಿರುವ ಪರಿಸ್ಥಿತಿ
ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಭಾರಿ ಕೈಗಾರಿಕಾ ಸಚಿವರಾಗಿದ್ದರೂ, ಅವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಧಿಕಾರವಿಲ್ಲ ಎಂದು ಪ್ರದೀಪ್ ಈಶ್ವರ್ ಗಂಭೀರ ಆರೋಪ ಮಾಡಿದರು. ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಸಂತೋಷ್ ಜಿ.ಎಸ್. ಅವರ ಅನುಮತಿ ಇಲ್ಲದೆ ಕುಮಾರಸ್ವಾಮಿ ಅವರು ಒಂದು ಸಣ್ಣ ಫೈಲ್ ಕೂಡ ಮುಟ್ಟುವಂತಿಲ್ಲ. ಅಲ್ಲಿ ಬಿಜೆಪಿ ನಾಯಕರು ಇವರ ಕೈಕಟ್ಟಿ ಹಾಕಿದ್ದಾರೆ. ದೆಹಲಿಯಲ್ಲಿ ತಮ್ಮ ಆಟ ನಡೆಯುವುದಿಲ್ಲ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ, ಮತ್ತೆ ರಾಜ್ಯ ರಾಜಕೀಯದ ಕಡೆ ಮುಖ ಮಾಡಿದ್ದಾರೆ. ಸ್ಥಳೀಯ ಚುನಾವಣೆಗಳನ್ನು ಪ್ರತ್ಯೇಕವಾಗಿ ಎದುರಿಸುತ್ತೇವೆ ಎನ್ನುವವರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಯಾಕೆ? ಇದು ಅವರ ಭಯವನ್ನು ತೋರಿಸುತ್ತದೆ ಎಂದು ಪ್ರದೀಪ್ ಈಶ್ವರ್ ವಿಶ್ಲೇಷಿಸಿದರು.
ಒಕ್ಕಲಿಗ ನಾಯಕತ್ವದ ಪೈಪೋಟಿ ಮತ್ತು ಡಿಕೆಶಿ ಅಸ್ತ್ರ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ನಾಯಕರು ಟಾರ್ಗೆಟ್ ಮಾಡುತ್ತಿರುವ ಬಗ್ಗೆಯೂ ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರೇ, ನೀವು ಅದೃಷ್ಟದ ಬಲದಿಂದ, ಆಕಸ್ಮಿಕವಾಗಿ ಸಿಎಂ ಆದವರು. ಅಂದು ನಮ್ಮ ಜಮೀರ್ ಅಹ್ಮದ್ ಖಾನ್ ಅವರು ಬಸ್ ಡ್ರೈವಿಂಗ್ ಮಾಡಿಕೊಂಡು ನಿಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದರು. ಕಾಂಗ್ರೆಸ್ ಶಾಸಕರ ಭಿಕ್ಷೆಯಿಂದ ನೀವು ಮುಖ್ಯಮಂತ್ರಿಯಾಗಿದ್ದಿರಿ. ಆದರೆ ಡಿ.ಕೆ. ಶಿವಕುಮಾರ್ ಹಾಗಲ್ಲ. ಅವರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಬಂದು, ಕನಕಪುರದಲ್ಲಿ ಬಂಡೆಯಂತೆ ಗಟ್ಟಿಯಾಗಿ ನಿಂತು, ಸ್ವಂತ ಪರಿಶ್ರಮದಿಂದ ಬೆಳೆದ ನಾಯಕ.
ಇಂದು ಒಕ್ಕಲಿಗ ಸಮುದಾಯದ ಮೇಲಿನ ಹಿಡಿತ ಕುಮಾರಸ್ವಾಮಿ ಅವರ ಮನೆಯಂಗಳದಿಂದ ಡಿ.ಕೆ. ಶಿವಕುಮಾರ್ ಅವರ ಮನೆಗೆ ಸ್ಥಳಾಂತರಗೊಂಡಿದೆ. ಕರ್ನಾಟಕದ ಸಮಸ್ತ ಒಕ್ಕಲಿಗರು ಡಿಕೆಶಿಯನ್ನು ತಮ್ಮ ಪ್ರಶ್ನಾತೀತ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕ ಬೆಳೆಯುವುದು ನಿಮಗೆ ಇಷ್ಟವಿಲ್ಲವೇ? ಡಿಕೆ ಶಿವಕುಮಾರ್ ಬೆಳೆದರೆ ತಮ್ಮ ರಾಜಕೀಯ ಭವಿಷ್ಯ ಕಮರಿ ಹೋಗುತ್ತದೆ ಎಂಬ ಭಯದಿಂದಲೇ ಅವರನ್ನು ಬೆಳಿಗ್ಗೆ ಮತ್ತು ಸಂಜೆ ಎನ್ನದೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಪ್ರದೀಪ್ ಈಶ್ವರ್ ನೇರ ವಾಗ್ದಾಳಿ ನಡೆಸಿದರು.








