ಬೆಂಗಳೂರು: ಕೆಜಿಎಫ್ ಸರಣಿಯ ಬೃಹತ್ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ಈ ಟೀಸರ್ ಇದೀಗ ಕಾನೂನಿನ ಸಂಕೋಲೆಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಟಾಕ್ಸಿಕ್ ಸಿನಿಮಾದ ಟೀಸರ್ ಪ್ರಸಾರವನ್ನು ತಕ್ಷಣವೇ ನಿಲ್ಲಿಸಬೇಕು ಅಥವಾ ಸ್ಪಷ್ಟವಾದ ಮಾರ್ಗಸೂಚಿಗಳೊಂದಿಗೆ (Guidelines) ಪ್ರಸಾರ ಮಾಡಬೇಕೆಂದು ಆಗ್ರಹಿಸಿ ವಕೀಲರಾದ ಲೋಹಿತ್ ಅವರು ಸೆನ್ಸಾರ್ ಮಂಡಳಿಗೆ ದೂರು ನೀಡಲು ಮುಂದಾಗಿದ್ದಾರೆ.
ಟೀಸರ್ ವಿರುದ್ಧ ವಕೀಲರ ಆಕ್ಷೇಪವೇನು?
ವಕೀಲ ಲೋಹಿತ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಟಾಕ್ಸಿಕ್ ಟೀಸರ್ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಿದೆ ಎಂದು ಆರೋಪಿಸಿದ್ದಾರೆ. ಯೂಟ್ಯೂಬ್ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಯಸ್ಕರಿಗೆ ಮಾತ್ರ ಸೀಮಿತವಾದ ಕಂಟೆಂಟ್‌ಗಳಿಗೆ ಕಮ್ಯುನಿಟಿ ಗೈಡ್‌ಲೈನ್ಸ್ ಇರುತ್ತದೆ. ಆದರೆ, ಟಾಕ್ಸಿಕ್ ಟೀಸರ್‌ನಲ್ಲಿ ಹಸಿಬಿಸಿ ದೃಶ್ಯಗಳು ಹಾಗೂ ಹಿಂಸಾತ್ಮಕ ಎಳೆಗಳು ಇದ್ದರೂ, ಯಾವುದೇ ಎಚ್ಚರಿಕೆ ಇಲ್ಲದೆ ಮುಕ್ತವಾಗಿ ಪ್ರಸಾರವಾಗುತ್ತಿದೆ. ಇದು ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ದೂರಿದ್ದಾರೆ.
ವೀಕ್ಷಕರು ಸಿನಿಮಾ ನೋಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಮೊದಲೇ ಸ್ಪಷ್ಟನೆ ಇರಬೇಕು. ಟೀಸರ್ ಆರಂಭಕ್ಕೂ ಮುನ್ನವೇ ಇದು ವಯಸ್ಕರಿಗೆ ಮಾತ್ರ ಅಥವಾ ಮಕ್ಕಳು ನೋಡಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಬೇಕಿತ್ತು ಎಂಬುದು ಅವರ ವಾದವಾಗಿದೆ.
ಕುಟುಂಬ ಸಮೇತ ನೋಡುವಂತಹ ದೃಶ್ಯಗಳಲ್ಲ
ಸಾಮಾನ್ಯವಾಗಿ ಸಿನಿಮಾಗಳು ಬಿಡುಗಡೆಯಾದಾಗ ಸೆನ್ಸಾರ್ ಮಂಡಳಿಯು ಎ ಅಥವಾ ಯು ಪ್ರಮಾಣಪತ್ರ ನೀಡುತ್ತದೆ. ಎ ಸರ್ಟಿಫಿಕೇಟ್ ಇದ್ದರೆ ಥಿಯೇಟರ್‌ಗಳಲ್ಲಿ ವಯಸ್ಕರ ಗುರುತಿನ ಚೀಟಿ ಪರಿಶೀಲಿಸಿ ಪ್ರವೇಶ ನೀಡಲಾಗುತ್ತದೆ. ಆದರೆ ಯೂಟ್ಯೂಬ್‌ನಲ್ಲಿ ಬರುವ ಟೀಸರ್‌ಗಳಿಗೆ ಅಂತಹ ಯಾವುದೇ ತಡೆಗಳಿಲ್ಲ. ಟಾಕ್ಸಿಕ್ ಟೀಸರ್ ಅನ್ನು ಕುಟುಂಬದವರು ಮಕ್ಕಳ ಜೊತೆ ಕುಳಿತು ನೋಡುವಾಗ ಮುಜುಗರಪಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಎಷ್ಟೋ ಪೋಷಕರು ಮಕ್ಕಳ ಜೊತೆ ಈ ಟೀಸರ್ ನೋಡಿ ಬೇಸರ ಹೊರಹಾಕಿದ್ದಾರೆ ಎಂದು ಲೋಹಿತ್ ತಿಳಿಸಿದ್ದಾರೆ.
ಈ ಕುರಿತು ಎಚ್ಚರಿಸಿದ ಅವರು, ಇದು ಕುಟುಂಬ ಸಮೇತ ನೋಡುವ ಸಿನಿಮಾವಲ್ಲ, ಚಿಕ್ಕ ಮಕ್ಕಳಿಗೆ ಸಿನಿಮಾ ತೋರಿಸಲೇಬಾರದು ಎಂದು ಮುನ್ನಚ್ಚರಿಕೆಯಿಂದ ಹೇಳಬೇಕು ಎಂದಿದ್ದಾರೆ.
ವೈಭವೀಕರಣದ ವಿರುದ್ಧ ಆಕ್ರೋಶ ಮತ್ತು ಡಾ ರಾಜ್‌ಕುಮಾರ್ ಉದಾಹರಣೆ
ನಾನು ಯಾವುದೇ ಪ್ರಚಾರದ ಗೀಳಿಗಾಗಿ ಅಥವಾ ಯಶ್ ಅವರ ಮೇಲಿನ ದ್ವೇಷಕ್ಕಾಗಿ ಈ ರೀತಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ವಕೀಲರು, ಸಮಾಜದ ಸ್ವಾಸ್ಥ್ಯವೇ ತಮಗೆ ಮುಖ್ಯ ಎಂದಿದ್ದಾರೆ. ಹಿಂದೆ ವರನಟ ಡಾ ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯದಂತಹ ಸಿನಿಮಾಗಳನ್ನು ನೋಡಿ ಜನರು ಕೃಷಿಯಲ್ಲಿ ತೊಡಗಿಸಿಕೊಂಡರು, ಸಮಾಜಕ್ಕೆ ಒಳಿತಾಯಿತು. ಆದರೆ ಇಂದಿನ ಸಿನಿಮಾಗಳಲ್ಲಿ ನಡೆಯುತ್ತಿರುವ ದುಶ್ಚಟಗಳ ವೈಭವೀಕರಣದಿಂದ ಸಮಾಜ ಹಾದಿ ತಪ್ಪುತ್ತಿದೆ. ನಿರ್ಮಾಪಕರು ಸಿನಿಮಾ ಮಾಡಲಿ, ಆದರೆ ಕೆಟ್ಟದ್ದನ್ನು ವೈಭವೀಕರಿಸುವುದು ಬೇಡ ಎಂದು ಕಿವಿಮಾತು ಹೇಳಿದ್ದಾರೆ.
ನಟನಿಗಿಂತ ಸಮಾಜದ ಮಕ್ಕಳೇ ಮುಖ್ಯ
ಅಂತಿಮವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಲೋಹಿತ್, ನನಗೆ ನಟ ಯಶ್ ಅವರಿಗಿಂತ ನಮ್ಮ ಸಮಾಜದ ಮಕ್ಕಳು ಮುಖ್ಯ. ನಮ್ಮ ಮಕ್ಕಳನ್ನು ಕಾಪಾಡಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ಈಗ ಟೀಸರ್ ಬಿಡುವಾಗಲೂ ಕೂಡ ಮಕ್ಕಳು ನೋಡಬಾರದು ಎನ್ನುವಂತಹ ಗೈಡ್‌ಲೈನ್ ನೀಡಬೇಕು. ಹೀಗೆ ಮಾಡಿದ್ದರೆ ಮಾತ್ರ ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳಬಹುದು. ಸೆನ್ಸಾರ್ ಮಂಡಳಿಯವರು ಈಗ ಇರುವ ಟೀಸರ್ ಹಿಂಪಡೆಯಬೇಕು, ಸೂಕ್ತ ಎಚ್ಚರಿಕೆ ಅಥವಾ ಕಾಷನ್ (Caution) ಕೊಟ್ಟರೆ ಮಾತ್ರ ಟೀಸರ್ ರಿಲೀಸ್ ಮಾಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಟಾಕ್ಸಿಕ್ ಟೀಸರ್ ವಿವಾದವು ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಸೆನ್ಸಾರ್ ಮಂಡಳಿ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.








