ಚೆನ್ನೈ: ತಮಿಳುನಾಡಿನ ರಾಜಕೀಯ ರಣರಂಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಟ ದಳಪತಿ ವಿಜಯ್ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ದಂತೆಯೇ ಆಡಳಿತರೂಢ ಡಿಎಂಕೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಎಚ್ಚೆತ್ತುಕೊಂಡಂತಿದ್ದು, ವಿಜಯ್ ಅವರ ಬಹುನಿರೀಕ್ಷಿತ ಜನನಾಯಗನ್ ಸಿನಿಮಾವನ್ನು ದಾಳವಾಗಿಸಿಕೊಂಡು ರಾಜಕೀಯ ಚದುರಂಗದಾಟ ನಡೆಸುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದು ಕೇವಲ ಒಂದು ಸಿನಿಮಾದ ಬಿಡುಗಡೆಯ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ಇದೊಂದು ಪಕ್ಕಾ ರಾಜಕೀಯ ಷಡ್ಯಂತ್ರದಂತೆ ಗೋಚರಿಸುತ್ತಿದೆ.
ದಳಪತಿಗೆ ಅಷ್ಟದಿಗ್ಬಂಧನ: ಡಿಎಂಕೆ-ಬಿಜೆಪಿ ಮೈತ್ರಿಕೂಟದ ತಂತ್ರ?
ದಳಪತಿ ವಿಜಯ್ ಅವರ ತಮಿಳಗ ವಟ್ರಿ ಕಳಗಂ (TVK) ಪಕ್ಷದ ಉದಯ ತಮಿಳುನಾಡಿನ ದ್ರಾವಿಡ ರಾಜಕಾರಣದಲ್ಲಿ ನಡುಕ ಹುಟ್ಟಿಸಿದೆ. ಇದರ ಬೆನ್ನಲ್ಲೇ ವಿಜಯ್ ಅವರ ಜನನಾಯಗನ್ ಚಿತ್ರಕ್ಕೆ ಎದುರಾಗಿರುವ ಅಡೆತಡೆಗಳು ಆಕಸ್ಮಿಕವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದೆಡೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ, ಮತ್ತೊಂದೆಡೆ ಕೇಂದ್ರದ ಬಿಜೆಪಿ ಸರ್ಕಾರ ಪರೋಕ್ಷವಾಗಿ ಕೈಜೋಡಿಸಿ ವಿಜಯ್ ಅವರ ವರ್ಚಸ್ಸನ್ನು ಕುಗ್ಗಿಸಲು ಸಿನಿಮಾವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂಬ ಮಾತುಗಳು ಕೋಲಿವುಡ್ ಅಂಗಳದಲ್ಲಿ ದಟ್ಟವಾಗಿವೆ.
ಸೆನ್ಸಾರ್ ಮಂಡಳಿಯ ಹೆಸರಿನಲ್ಲಿ ರಾಜಕೀಯ ಆಟ
ಚಿತ್ರಕ್ಕೆ ಸೆನ್ಸಾರ್ ಮಂಡಳಿ ನೀಡುತ್ತಿರುವ ಸಾಲು ಸಾಲು ತೊಂದರೆಗಳು ಸಂಶಯಕ್ಕೆ ಎಡೆಮಾಡಿಕೊಟ್ಟಿವೆ. ಮದ್ರಾಸ್ ಹೈಕೋರ್ಟ್ ಸ್ವತಃ ಮಧ್ಯಪ್ರವೇಶಿಸಿ, ಚಿತ್ರಕ್ಕೆ ಯು/ಎ (U/A) ಪ್ರಮಾಣಪತ್ರ ನೀಡುವಂತೆ ಸೂಚಿಸಿದರೂ, ಸೆನ್ಸಾರ್ ಮಂಡಳಿ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವುದು ಯಾವ ಅದೃಶ್ಯ ಶಕ್ತಿಯ ಒತ್ತಡ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಜನವರಿ 9ರಂದು ತೆರೆಕಂಡು ಹೊಸ ದಾಖಲೆ ಬರೆಯಬೇಕಿದ್ದ ಸಿನಿಮಾ, ಈಗ ಕಾನೂನಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಆನ್‌ಲೈನ್ ಬುಕಿಂಗ್ ಮೂಲಕ ಸಂಗ್ರಹವಾಗಿದ್ದ ಬರೋಬ್ಬರಿ 42 ಕೋಟಿ ರೂಪಾಯಿಗಳನ್ನು ಹಿಂತಿರುಗಿಸಿರುವುದು ಚಿತ್ರತಂಡಕ್ಕೆ ಮತ್ತು ನಿರ್ಮಾಪಕರಿಗೆ ಬಿದ್ದ ಮೊದಲ ಆರ್ಥಿಕ ಏಟು.
ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಕಣ್ಣೀರು
ಕನ್ನಡದ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅವರು ಸುಮಾರು 300 ಕೋಟಿ ರೂಪಾಯಿ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆದರೆ ರಾಜಕೀಯ ಜಿದ್ದಾಜಿದ್ದಿನ ನಡುವೆ ನಿರ್ಮಾಪಕರು ಬಲಿಪಶುವಾಗುತ್ತಿದ್ದಾರೆ. ವಿಡಿಯೋ ಮೂಲಕ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿರುವ ಅವರು, ನ್ಯಾಯಾಲಯದ ಮೇಲೆ ಭರವಸೆ ಇಟ್ಟಿದ್ದರೂ, ಆಗುತ್ತಿರುವ ವಿಳಂಬದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡ್ಡಿ ಸಾಲದ ಸುಳಿಯಲ್ಲಿ ನಿರ್ಮಾಪಕರು ನಲುಗುತ್ತಿದ್ದರೆ, ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ.
ಚುನಾವಣಾ ನೀತಿ ಸಂಹಿತೆಯ ತೂಗುಗತ್ತಿ
ನಿಜವಾದ ಆಟ ಈಗ ಶುರುವಾಗಲಿದೆ. ಫೆಬ್ರವರಿ ಮೊದಲ ವಾರದಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಒಮ್ಮೆ ಚುನಾವಣಾ ನೀತಿ ಸಂಹಿತೆ (Code of Conduct) ಜಾರಿಯಾದರೆ, ಮೇ ತಿಂಗಳಿನಲ್ಲಿ ಫಲಿತಾಂಶ ಬರುವವರೆಗೂ ವಿಜಯ್ ಅವರ ಸಿನಿಮಾ ಬಿಡುಗಡೆಯಾಗುವುದು ಅಸಾಧ್ಯ. ಏಕೆಂದರೆ ವಿಜಯ್ ಈಗ ಅಧಿಕೃತವಾಗಿ ರಾಜಕೀಯ ಪಕ್ಷದ ನಾಯಕ. ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ, ಅವರ ಸಿನಿಮಾ ಬಿಡುಗಡೆಯು ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣ ನೀಡಿ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡುವ ಎಲ್ಲಾ ಸಾಧ್ಯತೆಗಳೂ ಇವೆ. ಇದೇ ಕಾರಣಕ್ಕೆ ಸೆನ್ಸಾರ್ ನೆಪದಲ್ಲಿ ಸಿನಿಮಾವನ್ನು ಫೆಬ್ರವರಿವರೆಗೆ ಎಳೆಯುವ ತಂತ್ರಗಾರಿಕೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಸ್ಟಾಲಿನ್ ಸರ್ಕಾರಕ್ಕೆ ತಿರುಗುಬಾಣವಾಗಲಿದೆಯೇ ಈ ನಡೆ?
ದಳಪತಿ ವಿಜಯ್ ಅವರನ್ನು ಹತ್ತಿಕ್ಕಲು ನಡೆಸುತ್ತಿರುವ ಈ ಪ್ರಯತ್ನಗಳು ಡಿಎಂಕೆ ಸರ್ಕಾರಕ್ಕೆ ಮುಳುವಾಗುವ ಲಕ್ಷಣಗಳು ಕಾಣುತ್ತಿವೆ. ಸಿನಿಮಾ ಬಿಡುಗಡೆಯನ್ನು ತಡೆಯುವ ಮೂಲಕ ವಿಜಯ್ ಅವರನ್ನು ಹಣಿಯಲು ನೋಡಿದರೆ, ಅದು ತಮಿಳುನಾಡಿನ ಜನರಲ್ಲಿ ವಿಜಯ್ ಪರವಾಗಿ ಭಾರೀ ಅನುಕಂಪದ ಅಲೆಯನ್ನು (Sympathy Wave) ಸೃಷ್ಟಿಸಬಹುದು. ಅಧಿಕಾರ ಮತ್ತು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಒಬ್ಬ ಕಲಾವಿದನನ್ನು ಹಾಗೂ ಆತನ ರಾಜಕೀಯ ಬೆಳವಣಿಗೆಯನ್ನು ತಡೆಯಲಾಗುತ್ತಿದೆ ಎಂಬ ಸಂದೇಶ ಮತದಾರರಿಗೆ ರವಾನೆಯಾದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಬಹುದು. ವಿಜಯ್ ಅವರ ಸೋಲನ್ನೇ ಬಯಸುತ್ತಿರುವ ಎದುರಾಳಿಗಳು, ಪರೋಕ್ಷವಾಗಿ ಅವರ ಗೆಲುವಿಗೆ ರತ್ನಗಂಬಳಿ ಹಾಸುತ್ತಿದ್ದಾರೆಯೇ ಎಂಬ ಚರ್ಚೆ ಈಗ ಜೋರಾಗಿದೆ.
ಒಟ್ಟಿನಲ್ಲಿ ಜನವರಿ 21ರಂದು ನಡೆಯಲಿರುವ ಕೋರ್ಟ್ ವಿಚಾರಣೆ ಅಂತಿಮ ತೀರ್ಪು ನೀಡಲಿದೆಯೇ ಅಥವಾ ಎಲೆಕ್ಷನ್ ಮುಗಿಯುವವರೆಗೂ ದಳಪತಿ ಅಭಿಮಾನಿಗಳು ಕಾಯಬೇಕೇ ಎಂಬುದು ಸದ್ಯದ ಕುತೂಹಲ. ಆದರೆ, ಈ ರಾಜಕೀಯ ಜುಗಲ್ ಬಂದಿಯಲ್ಲಿ ಕೋಟ್ಯಂತರ ರೂಪಾಯಿ ಸುರಿದ ನಿರ್ಮಾಪಕನ ಬದುಕು ಮಾತ್ರ ಅತಂತ್ರವಾಗಿದೆ.








