ರಾಜ್ಯದ ಸಹಕಾರಿ ಸಂಘಗಳ ಸದಸ್ಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಬಹುನಿರೀಕ್ಷಿತ ಹಾಗೂ ಜನಪ್ರಿಯ 2025-26ನೇ ಸಾಲಿನ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರೊಂದಿಗೆ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ಸದಸ್ಯತ್ವ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಕುರಿತಂತೆ ಅಧಿಕೃತ ನಡವಳಿಗಳನ್ನು ಹೊರಡಿಸಿದ್ದು, ಸಹಕಾರಿಗಳ ಆರೋಗ್ಯದ ಹಿತದೃಷ್ಟಿಯಿಂದ ಯೋಜನೆಯನ್ನು ಮುಂದಿನ ಸಾಲಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ
ಸರ್ಕಾರದ ಪ್ರತಿಷ್ಠಿತ ಫ್ಲ್ಯಾಗ್ ಶಿಪ್ ಯೋಜನೆ
ಯಶಸ್ವಿನಿ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿರುವಂತೆ, ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಒಂದು ಪ್ರತಿಷ್ಠಿತ ಮತ್ತು ವಿಶಿಷ್ಟ ಯೋಜನೆಯಾಗಿದೆ. ರಾಜ್ಯದ ರೈತರು ಹಾಗೂ ಸಹಕಾರಿ ಸಂಘಗಳ ಸದಸ್ಯರಿಗೆ ಆರೋಗ್ಯ ಭದ್ರತೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
5 ಲಕ್ಷ ರೂಪಾಯಿವರೆಗೆ ಚಿಕಿತ್ಸಾ ಸೌಲಭ್ಯ
ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿ ಮತ್ತು ಅವರ ಕುಟುಂಬ ಸದಸ್ಯರು ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಯಶಸ್ವಿನಿ ಫೋಟೋಕಾಲ್ ನಂತೆ ನಿಗದಿಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳಪಟ್ಟು, ಒಂದು ಕುಟುಂಬವು ವಾರ್ಷಿಕವಾಗಿ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಪಡೆಯಲು ಅವಕಾಶವಿದೆ.
ಇದು ವಿಮಾ ಯೋಜನೆಯಲ್ಲ ಆರೋಗ್ಯ ರಕ್ಷಣಾ ಯೋಜನೆ
ಸಾರ್ವಜನಿಕರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಯಶಸ್ವಿನಿ ಯೋಜನೆಯು ಸಾಮಾನ್ಯ ವಿಮಾ ಯೋಜನೆಯಾಗಿರುವುದಿಲ್ಲ. ಬದಲಾಗಿ ಇದೊಂದು ಸ್ವಯಂ ನಿಧಿ (Self Funded) ಯೋಜನೆಯಾಗಿರುತ್ತದೆ. ಅಂದರೆ ಇದೊಂದು ಸಹಕಾರ ಸಂಘಗಳ ಸದಸ್ಯರ ಆರೋಗ್ಯ ರಕ್ಷಣಾ (Co-operative Society Members Health Assurance Scheme) ಯೋಜನೆಯಾಗಿದ್ದು, ಸಹಕಾರ ಸಂಘಗಳ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾರೆ.
ಸರ್ಕಾರದ ಅನುದಾನ
ಈ ಯೋಜನೆಗೆ ರಾಜ್ಯ ಸರ್ಕಾರವು ಬೆನ್ನೆಲುಬಾಗಿ ನಿಂತಿದ್ದು, ವಾರ್ಷಿಕ ಆಯವ್ಯಯದಲ್ಲಿ (ಬಜೆಟ್) ಅಗತ್ಯ ಅನುದಾನವನ್ನು ಒದಗಿಸುವ ಮೂಲಕ ಯೋಜನೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನೋಂದಣಿ ಕಾರ್ಯ ಆರಂಭ
ಯಶಸ್ವಿನಿ ಟ್ರಸ್ಟ್ ನ ಕೋರಿಕೆಯ ಮೇರೆಗೆ 2025-26ನೇ ಸಾಲಿಗೂ ಯೋಜನೆಯನ್ನು ಮುಂದುವರೆಸಲಾಗುತ್ತಿದ್ದು, ಸದಸ್ಯರ ನೋಂದಣಿಯನ್ನು ಪ್ರಾರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಕುರಿತಾದ ಸಮಗ್ರ ಮಾರ್ಗಸೂಚಿಗಳನ್ನು ಸಹಕಾರ ಇಲಾಖೆ ಬಿಡುಗಡೆ ಮಾಡಿದೆ. ಆಸಕ್ತ ಸಹಕಾರಿ ಸಂಘಗಳ ಸದಸ್ಯರು ಕೂಡಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.








