ಗುಜರಾತ್: ಜ್ಯೋತಿರ್ಲಿಂಗಗಳ ಪೈಕಿ ಅಗ್ರಗಣ್ಯವಾದ ಗುಜರಾತ್ ನ ಪವಿತ್ರ ಸೋಮನಾಥ ಸನ್ನಿಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಐತಿಹಾಸಿಕ ಹೋರಾಟ ಮತ್ತು ಧಾರ್ಮಿಕ ಪುನರುತ್ಥಾನದ ಬಗ್ಗೆ ಸಿಂಹಗರ್ಜನೆ ಮಾಡಿದ್ದಾರೆ. ಸೋಮನಾಥ ದೇವಾಲಯದಲ್ಲಿ ನಡೆದ ಸ್ವಾಭಿಮಾನ್ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮೇಲೆ ದಾಳಿ ಮಾಡಿದ ಘಜನಿ, ಖಿಲ್ಜಿ ಮತ್ತು ಔರಂಗಜೇಬರಂತಹ ಆಕ್ರಮಣಕಾರರ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ ಸೇರಿದ್ದ ಜನಸ್ತೋಮ ಹರ್ಷೋದ್ಘಾರ ವ್ಯಕ್ತಪಡಿಸಿತು.
ಸಾವಿರ ವರ್ಷಗಳ ಹೋರಾಟ ಮತ್ತು ಗೆಲುವು
ಜೈ ಸೋಮನಾಥ ಎಂಬ ಭಕ್ತಿಪೂರ್ವಕ ಘೋಷಣೆಯೊಂದಿಗೆ ಮಾತು ಆರಂಭಿಸಿದ ಮೋದಿ, ಇತಿಹಾಸದ ಪುಟಗಳನ್ನು ತೆರೆದಿಟ್ಟರು. ಇಂದಿಗೆ ಸರಿಯಾಗಿ 1,000 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ನಮ್ಮ ಪೂರ್ವಜರು ಮಹಾದೇವನಿಗಾಗಿ, ತಮ್ಮ ಧರ್ಮ ಮತ್ತು ನಂಬಿಕೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದರು. ಅಂದು ಆಕ್ರಮಣಕಾರರು ನಮ್ಮನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದೇವೆ ಎಂದು ಬೀಗಿದ್ದರು. ಅವರ ಕತ್ತಿಗಳು ಸೋಮನಾಥನ ಅಸ್ತಿತ್ವವನ್ನೇ ಅಳಿಸಿಹಾಕಿದವು ಎಂದು ಭಾವಿಸಿದ್ದರು. ಆದರೆ ಇಂದು 1,000 ವರ್ಷಗಳ ನಂತರವೂ ಅದೇ ಸೋಮನಾಥ ಮಂದಿರದ ಶಿಖರದ ಮೇಲೆ ಹಾರುತ್ತಿರುವ ಧ್ವಜವು ಇಡೀ ವಿಶ್ವಕ್ಕೆ ಭಾರತದ ಅಜೇಯ ಶಕ್ತಿ ಏನೆಂಬುದನ್ನು ಸಾರುತ್ತಿದೆ. ಇಲ್ಲಿನ ಪ್ರತಿಯೊಂದು ಕಣವೂ ನಮ್ಮ ಪೂರ್ವಜರ ಶೌರ್ಯ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.
ಘಜನಿ ಖಿಲ್ಜಿ ಔರಂಗಜೇಬರಿಂದ ವಿಫಲ ಯತ್ನ
ಭಾರತದ ಇತಿಹಾಸ ಮತ್ತು ಸೋಮನಾಥ ದೇವಾಲಯದ ಇತಿಹಾಸಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದ ಮೋದಿ, ವಿದೇಶಿ ಆಕ್ರಮಣಕಾರರ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮಹಮ್ಮದ್ ಘಜ್ನವಿ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದ, ಅಲಾವುದ್ದೀನ್ ಖಿಲ್ಜಿ ಈ ಪವಿತ್ರ ನೆಲದ ಮೇಲೆ ಕ್ರೂರ ದಾಳಿ ನಡೆಸಿದ, ಅಷ್ಟೇ ಅಲ್ಲದೆ ಮೊಘಲ್ ದೊರೆ ಔರಂಗಜೇಬನು ಸೋಮನಾಥವನ್ನು ಅಪವಿತ್ರಗೊಳಿಸಿ ಅದನ್ನು ಮಸೀದಿಯಾಗಿ ಪರಿವರ್ತಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದನು. ಆದರೆ ಸತ್ಯ ಏನೆಂದರೆ, ಅಧರ್ಮ ಎಷ್ಟೇ ಆರ್ಭಟಿಸಿದರೂ ಧರ್ಮದ ವಿಜಯ ನಿಶ್ಚಿತ. ಸೋಮನಾಥ ಅಥವಾ ಭಾರತ ಎಂದಿಗೂ ತಲೆಬಾಗಲಿಲ್ಲ. ಪ್ರತಿ ಬಾರಿಯ ವಿನಾಶದ ನಂತರವೂ ಸೋಮನಾಥ ದೇವಾಲಯವು ಇನ್ನಷ್ಟು ವೈಭವದಿಂದ ಪುನಃ ಸ್ಥಾಪನೆಯಾಗಿದೆ ಎಂದು ಮೋದಿ ಗುಡುಗಿದರು.
ಸೋಮ ಎಂದರೆ ಅಮೃತ
ಧಾರ್ಮಿಕ ಮತಾಂಧರು ಕೇವಲ ಕಲ್ಲು ಮಣ್ಣಿನ ಕಟ್ಟಡವನ್ನು ಕೆಡವಬಲ್ಲರೇ ಹೊರತು ಶ್ರದ್ಧೆಯನ್ನಲ್ಲ ಎಂದು ಪ್ರತಿಪಾದಿಸಿದ ಪ್ರಧಾನಿ, ಸೋಮನಾಥ ಹೆಸರಿನ ಅರ್ಥವನ್ನು ವಿಶ್ಲೇಷಿಸಿದರು. ಸೋಮ ಎಂದರೆ ಅಮೃತ ಎಂದರ್ಥ. ಹಾಲಾಹಲ ವಿಷವನ್ನೇ ಕುಡಿದರೂ ಅಮರರಾಗಿ ಉಳಿದ ಶಿವನ ಚೈತನ್ಯ ಇಲ್ಲಿದೆ. ಘಜನಿಯಿಂದ ಔರಂಗಜೇಬನವರೆಗಿನ ಆಕ್ರಮಣಕಾರರು ಇದನ್ನು ಅರ್ಥಮಾಡಿಕೊಳ್ಳಲು ವಿಫಲರಾದರು. ಅವರು ಕಟ್ಟಡಗಳನ್ನು ಒಡೆದರು, ಆದರೆ ಇಲ್ಲಿರುವ ಸದಾಶಿವನ ಪ್ರಜ್ಞಾಪೂರ್ವಕ ಶಕ್ತಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಶಿವನು ಕಲ್ಯಾಣಕಾರಿಯೂ ಹೌದು ಮತ್ತು ಅನಿವಾರ್ಯವಾದಾಗ ಉಗ್ರ ತಾಂಡವದ ಮೂಲವೂ ಹೌದು ಎಂದು ಮೋದಿ ಹೇಳಿದರು.
ಸೋಮನಾಥ ಸ್ವಾಭಿಮಾನ ಪರ್ವ ಕೇವಲ ಒಂದು ಉತ್ಸವವಲ್ಲ, ಇದು ಭಾರತದ ಶಾಶ್ವತ ಪ್ರಜ್ಞೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಸೋಮನಾಥವು ಕೇವಲ ಯಾತ್ರಾಸ್ಥಳವಲ್ಲ, ಬದಲಾಗಿ ಎಲ್ಲಾ ಸವಾಲುಗಳ ನಡುವೆಯೂ ತನ್ನ ಅಸ್ತಿತ್ವ ಮತ್ತು ಹೆಮ್ಮೆಯನ್ನು ಉಳಿಸಿಕೊಂಡಿರುವ ಭಾರತದ ಸಾಂಸ್ಕೃತಿಕ ಆತ್ಮ, ಸಮಗ್ರತೆ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಜೀವನದ ಸೌಭಾಗ್ಯ ಹಾಗೂ ಮರೆಯಲಾಗದ ಕ್ಷಣ ಎಂದು ಪ್ರಧಾನಿ ಭಾವುಕರಾಗಿ ನುಡಿದರು.
ಒಟ್ಟಾರೆಯಾಗಿ, ಪ್ರಧಾನಿ ಮೋದಿಯವರ ಈ ಐತಿಹಾಸಿಕ ಭಾಷಣವು ಶತಮಾನಗಳ ನೋವು, ಅವಮಾನಗಳನ್ನು ಮೆಟ್ಟಿ ನಿಂತು ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿರುವ ನವ ಭಾರತದ ಸಂಕಲ್ಪವನ್ನು ಪ್ರತಿಧ್ವನಿಸಿತು.








