ಮದ್ದೂರು: ಮದ್ದೂರು ನಗರಸಭೆ ರಚನೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಮದ್ದೂರು ಶಾಸಕ ಕೆ.ಎಂ. ಉದಯ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸದಿದ್ದರೂ ಪರವಾಗಿಲ್ಲ, ಆದರೆ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಆರ್. ಅಶೋಕ್ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ವೈಯಕ್ತಿಕ ಹಣ ಖರ್ಚು ಮಾಡಿಯಾದರೂ ಸೋಲಿಸಿಯೇ ಸಿದ್ಧ ಎಂದು ಶಾಸಕ ಕೆ.ಎಂ. ಉದಯ್ ಗುಡುಗಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಬಿಜೆಪಿ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮದ್ದೂರು ರಾಜಕೀಯದ ಕಿಡಿ ಇದೀಗ ಬೆಂಗಳೂರಿನ ಪದ್ಮನಾಭನಗರದ ಅಂಗಳಕ್ಕೆ ತಲುಪಿದೆ
ಕನಕಪುರದಲ್ಲಿ ಠೇವಣಿ ಹೋಯ್ತು, ಈಗ ಪದ್ಮನಾಭನಗರದ ಸರದಿ
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ ಶಾಸಕ ಉದಯ್, ಕಳೆದ 2023ರ ಚುನಾವಣೆಯಲ್ಲಿ ಕನಕಪುರದಲ್ಲಿ ಸ್ಪರ್ಧಿಸಿ ಠೇವಣಿಯನ್ನೂ ಉಳಿಸಿಕೊಳ್ಳಲಾಗದ ನಾಯಕರು ಇವರು. ಪದ್ಮನಾಭನಗರ ಕ್ಷೇತ್ರದಲ್ಲಿ ಅಡ್ಜಸ್ಟ್‌ಮೆಂಟ್ ರಾಜಕೀಯ ನಡೆಯುತ್ತಿದೆ. ಅಲ್ಲಿ ಒಬ್ಬ ನಾಯ್ಡು ಅಭ್ಯರ್ಥಿಯನ್ನು ನಿಲ್ಲಿಸಿದರೆ, ಮತ್ತೊಬ್ಬ ನಾಯ್ಡುಗೆ ದುಡ್ಡು ಕೊಟ್ಟು ನಿಲ್ಲಿಸಲಾಗುತ್ತದೆ. ತಾಕತ್ತಿದ್ದರೆ ಅಶೋಕ್ ಅವರು ಪದ್ಮನಾಭನಗರ ಬಿಟ್ಟು ರಾಮನಗರ ಅಥವಾ ಬಿಟಿಎಂ ಲೇಔಟ್‌ನಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು. ಇದುವರೆಗೂ ನಾನು ಆ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಆದರೆ ಇನ್ನು ಮುಂದೆ ಶಕ್ತಿ ಸಿಕ್ಕರೆ ಅಶೋಕ್ ವಿರುದ್ಧ ಪ್ರಬಲ ಹೋರಾಟ ರೂಪಿಸುತ್ತೇನೆ ಎಂದು ಎಚ್ಚರಿಸಿದರು.
ಜಿಬಿಎ ತಡೆಯಲಾಗದವರು ಮದ್ದೂರು ನಗರಸಭೆ ತಡೆಯಲು ಬಂದಿದ್ದಾರೆ
ಮಾಜಿ ಡಿಸಿಎಂ ಹಾಗೂ ಸಚಿವರಾಗಿದ್ದ ಅಶೋಕ್ ಅವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯನ್ನು ತಡೆಯುವ ಶಕ್ತಿ ಇರಲಿಲ್ಲ. ಆದರೆ, ಇಲ್ಲಿ ಬಂದು ಮದ್ದೂರು ನಗರಸಭೆ ರಚನೆಯನ್ನು ವಿರೋಧಿಸುತ್ತಿದ್ದಾರೆ. ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸುವ ವಿಚಾರದಲ್ಲಿ ಸುಳ್ಳು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಾಲ್ಕೂ ಪಂಚಾಯಿತಿಗಳಲ್ಲಿ ನಿರ್ಣಯ ಕೈಗೊಂಡ ನಂತರವೇ ವಿಲೀನ ಪ್ರಕ್ರಿಯೆ ನಡೆದಿದೆ ಎಂಬ ಸತ್ಯವನ್ನು ಮಹಾನ್ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಉದಯ್ ಕಿಡಿಕಾರಿದರು.
ಪಂಚಾಯಿತಿ ಬೀಗ ಒಡೆದ ಬಿಜೆಪಿಗರು
ಭಾನುವಾರ ರಜೆ ಇದ್ದರೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಹಾಕಿದ್ದ ಬೀಗವನ್ನು ಒಡೆದು, ಅಧಿಕಾರಿಗಳ ಮೇಲೆ ಬಿಜೆಪಿ ನಾಯಕರು ರೌಡಿಗಳಂತೆ ದೌರ್ಜನ್ಯ ಎಸಗಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ನಡೆದುಕೊಳ್ಳುವ ರೀತಿ ಇದಲ್ಲ. ನನ್ನ ಅಧಿಕಾರಾವಧಿ ಇನ್ನೂ ಎರಡು ವರ್ಷವಿದ್ದು, ಇತಿಹಾಸ ಸೇರುವಂತಹ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಆದರೆ ನನ್ನ ಅಭಿವೃದ್ಧಿ ಸಹಿಸಲಾಗದೆ ವಿರೋಧ ಪಕ್ಷದವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಶಾಸಕರು ಗಂಭೀರ ಆರೋಪ ಮಾಡಿದರು.
ವಿದೇಶಿ ಶಾಸಕ ಎಂದು ಟೀಕಿಸುವವರಿಗೆ ತಿರುಗೇಟು
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧವೂ ಹರಿಹಾಯ್ದ ಉದಯ್, ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲಾಗದವರನ್ನು ಪರಿಷತ್ ನಾಯಕರನ್ನಾಗಿ ಮಾಡಲಾಗಿದೆ. ನನ್ನನ್ನು ಫಾರಿನ್ ಎಂಎಲ್‌ಎ ಎಂದು ಜರಿಯುವ ಇವರು, ಬೆಂಗಳೂರಿನಲ್ಲೇ ಬೇಳೆ ಬೇಯಿಸಿಕೊಳ್ಳಲಾಗದ ನಾಲಾಯಕ್‌ಗಳು. ನಾನು ಒಂದು ದಿನವೂ ನನ್ನ ಕ್ಷೇತ್ರದ ಜನರನ್ನು ಬೆಂಗಳೂರಿಗೆ ಅಲೆಯಿಸಿಲ್ಲ ಇಲ್ಲೇ ಇದ್ದು ಸೇವೆ ಮಾಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ರಿಯಲ್ ಎಸ್ಟೇಟ್ ಮಾಡಿ ಸಂಪಾದನೆ ಮಾಡಬೇಕಿದ್ದರೆ ರಾಜಕೀಯಕ್ಕೆ ಬರುವ ಅವಶ್ಯಕತೆ ಇರಲಿಲ್ಲ. ನಾನು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ, ನನ್ನನ್ನು ರಾಜಕೀಯವಾಗಿ ಹತ್ತಿಕ್ಕಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ನಗರಸಭೆ ವಿರೋಧಿ ಹೋರಾಟ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಹೋರಾಟದ ಸ್ಥಳಕ್ಕೆ ನಾನು ಹೋಗುವುದಿಲ್ಲ. ದೊಡ್ಡ ದೊಡ್ಡ ನಾಯಕರೇ ಬಂದು ಸಮಸ್ಯೆ ಬಗೆಹರಿಸಲಿ ಎಂದು ವ್ಯಂಗ್ಯವಾಡಿದರು.








