ಮೈಸೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲಾಗಿದೆ, ಅವರು ಯಾರಿಗೂ ಮರ್ಯಾದೆ ಕೊಡುವುದಿಲ್ಲ, ಇದನ್ನೇ ಅವರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪಾಲಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಎಂಬುವವರು ಸಿನಿಮಾ ಬ್ಯಾನರ್ ವಿಚಾರವಾಗಿ ಫೋನ್ ಮಾಡಿ ಧಮ್ಕಿ ಹಾಕಿರುವ ಘಟನೆ ಅತ್ಯಂತ ಖಂಡನೀಯ. ಅಧಿಕಾರಿಗೆ ಧಮ್ಕಿ ಹಾಕಿದ ಇಂತಹ ಪುಡಾರಿಗಳನ್ನು ಮೊದಲು ಒದ್ದು ಒಳಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಭಾಷೆಯೇ ಕಾರ್ಯಕರ್ತರಿಗೆ ಪ್ರೇರಣೆ
ಮುಖ್ಯಮಂತ್ರಿಗಳು ಬಳಸುವ ಭಾಷೆ ಮತ್ತು ನಡೆವಳಿಕೆ ಸರಿಯಾಗಿದ್ದರೆ, ಅವರ ಕಾರ್ಯಕರ್ತರ ನಡೆವಳಿಕೆಯೂ ಸರಿಯಾಗಿರುತ್ತಿತ್ತು. ಆದರೆ ಸಿದ್ದರಾಮಯ್ಯನವರೇ ಯಾರಿಗೂ ಗೌರವ ಕೊಡುವುದಿಲ್ಲ. ಹಿಂದೆ ಐಎಎಸ್ ಅಧಿಕಾರಿಯೊಬ್ಬರಿಗೆ ಸಿದ್ದರಾಮಯ್ಯನವರ ಬಂಟನೊಬ್ಬ ನಿಂದಿಸಿದ್ದ ಉದಾಹರಣೆಗಳಿವೆ. ಅಂತಹ ಸಂಸ್ಕೃತಿ ಈಗಲೂ ಮುಂದುವರಿದಿದೆ. ಸಿಎಂ ಆಡುವ ಮಾತುಗಳೇ ಬಚ್ಚಲಿನಂತಾಗಿರುವಾಗ, ಅವರ ಅನುಯಾಯಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ರಾಜ್ಯ ಫ್ಲೆಕ್ಸ್ ಮುಕ್ತವಾಗಲಿ
ಇದೇ ವೇಳೆ ಅನಧಿಕೃತ ಫ್ಲೆಕ್ಸ್ ಹಾವಳಿಯ ಬಗ್ಗೆ ಮಾತನಾಡಿದ ಅವರು, ರಾಜ್ಯವನ್ನು ಮೊದಲು ಫ್ಲೆಕ್ಸ್ ಮುಕ್ತ ಮಾಡಬೇಕು. ನಿಯಮ ಎಲ್ಲರಿಗೂ ಒಂದೇ ಆಗಿರಬೇಕು. ನನ್ನ ಫೋಟೋ ಇದ್ದರೂ ಸರಿ, ಅಂತಹ ಫ್ಲೆಕ್ಸ್ ಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಿ ಎಂದು ಕರೆ ನೀಡಿದರು.
ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನು
ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಸ್ಪಷ್ಟಪಡಿಸಿದ ಪ್ರತಾಪ್ ಸಿಂಹ, ನಾನು ಚಾಮರಾಜ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿದರು. ಚಾಮರಾಜ ಕ್ಷೇತ್ರದಲ್ಲಿ ವಿದ್ಯಾವಂತ ಮತದಾರರು ಹೆಚ್ಚಾಗಿದ್ದಾರೆ. ಇಲ್ಲಿನ ಜನರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಆದರೆ ಉಪದ್ರವ ನೀಡುವ ಜನಪ್ರತಿನಿಧಿಗಳು ಬೇಕಿಲ್ಲ. ವಿದ್ಯಾವಂತ ಜನತೆ ವಿದ್ಯಾವಂತ ಪ್ರತಿನಿಧಿಯನ್ನೇ ಬಯಸುತ್ತಾರೆ. ಬಿಜೆಪಿಯ ಶಂಕರಲಿಂಗೇಗೌಡರು ಜನಸ್ನೇಹಿ ಶಾಸಕರಾಗಿದ್ದರು, ಹಾಗೆಯೇ ಕಾಂಗ್ರೆಸ್ ನ ವಾಸು ಅವರು ಅಭಿವೃದ್ಧಿ ಸ್ನೇಹಿ ಶಾಸಕರಾಗಿದ್ದರು. ಇವರಿಬ್ಬರ ಕಾರ್ಯವೈಖರಿ ಸ್ಮರಣೀಯ. ಅಭ್ಯರ್ಥಿ ಯಾರಾಗಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಆದರೆ ಆಕಾಂಕ್ಷಿಗೂ ಮತ್ತು ಅಭ್ಯರ್ಥಿಗೂ ಇರುವ ವ್ಯತ್ಯಾಸ ತಿಳಿಯದ ಕೆಲವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಸತ್ತ ಆಡಳಿತದ ಹೆಣ ಹೊತ್ತಿದ್ದಾರೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣವಾಗಿ ಸತ್ತಿದೆ ಎಂದು ಟೀಕಿಸಿದ ಅವರು, ಸತ್ತ ಆಡಳಿತದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊತ್ತಿದ್ದಾರೆ, ಡಿ.ಕೆ. ಶಿವಕುಮಾರ್ ಹಿಂದೆ ಹೊತ್ತಿದ್ದಾರೆ. ಹೆಣವನ್ನು ಮುಂದೆ ಯಾರೇ ಹೊರಲಿ ಅಥವಾ ಹಿಂದೆ ಯಾರೇ ಹೊರಲಿ, ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಸಿದ್ದರಾಮಯ್ಯ ಎಂದಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಅವರು ಬಹಳ ಬೇಗ ಜನರ ಮನಸ್ಸಿನಿಂದ ದೂರವಾಗಲಿದ್ದಾರೆ. ಜನ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನುಳಿದ ಎರಡೂವರೆ ವರ್ಷ ಈ ಸತ್ತ ಆಡಳಿತವನ್ನು ಸಹಿಸಿಕೊಳ್ಳಲೇಬೇಕಿದೆ. ಈ ಸರ್ಕಾರ ಬೀಳುವುದಿಲ್ಲ, ಆದರೆ ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು ಅಷ್ಟೇ ಎಂದು ಭವಿಷ್ಯ ನುಡಿದರು.








