POK: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಜೊತೆ ನಂಟು ಹೊಂದಿರುವ ಕುಖ್ಯಾತ ಉಗ್ರ ಅಬು ಮೂಸಾ, ಮತ್ತೊಮ್ಮೆ ಭಾರತದ ವಿರುದ್ಧ ವಿಷಕಾರಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಕುಳಿತು ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿರುವ ಈತ, ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಮಾಡುವುದಾಗಿ ನೇರ ಬೆದರಿಕೆ ಹಾಕುವ ಮೂಲಕ ಕಣಿವೆ ರಾಜ್ಯದಲ್ಲಿ ಮತ್ತೊಮ್ಮೆ ರಕ್ತಪಾತದ ಎಚ್ಚರಿಕೆ ನೀಡಿದ್ದಾನೆ.
ಜಿಹಾದ್ ಒಂದೇ ಅಂತಿಮ ಮಾರ್ಗ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಘಾತಕಾರಿ ವಿಡಿಯೋದಲ್ಲಿ ಮಾತನಾಡಿರುವ ಅಬು ಮೂಸಾ, ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆ ಅಥವಾ ಶಾಂತಿ ಮಾರ್ಗಗಳು ಕೆಲಸ ಮಾಡುವುದಿಲ್ಲ ಎಂದು ಪ್ರತಿಪಾದಿಸಿದ್ದಾನೆ. ಕಾಶ್ಮೀರದ ಸ್ವಾತಂತ್ರ್ಯವು ಯಾರ ಮುಂದೆಯೂ ಕೈಯೊಡ್ಡಿ ಬೇಡುವುದರಿಂದ ಸಿಗುವುದಿಲ್ಲ, ಬದಲಾಗಿ ಅದು ಕೇವಲ ಹಿಂಸೆ ಮತ್ತು ಜಿಹಾದ್ ಮೂಲಕ ಮಾತ್ರ ಸಾಧ್ಯ. ಭಯೋತ್ಪಾದನೆ ಮತ್ತು ಜಿಹಾದ್ ಅಸ್ತ್ರಗಳನ್ನು ಬಳಸಿಯೇ ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ ಎಂದು ಅಬು ಮೂಸಾ ಕಾಶ್ಮೀರದ ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಚೋದನಕಾರಿ ಹೇಳಿಕೆ ನೀಡಿದ್ದಾನೆ.
ಪಾಕಿಸ್ತಾನದ ನಾಯಕರ ವಿರುದ್ಧವೇ ಕಿಡಿ
ಕೇವಲ ಭಾರತದ ವಿರುದ್ಧ ಮಾತ್ರವಲ್ಲದೆ, ಪಾಕಿಸ್ತಾನದ ಆಡಳಿತಾರೂಢ ನಾಯಕರ ವಿರುದ್ಧವೂ ಅಬು ಮೂಸಾ ಹರಿಹಾಯ್ದಿದ್ದಾನೆ. ಪಾಕಿಸ್ತಾನದ ಈಗಿನ ನಾಯಕರು ಇಸ್ಲಾಮಿಕ್ ತತ್ವಗಳಿಂದ ಮತ್ತು ಮೂಲಭೂತ ಜಿಹಾದ್ ಪರಿಕಲ್ಪನೆಯಿಂದ ದೂರ ಸರಿದಿದ್ದಾರೆ ಎಂದು ಆರೋಪಿಸಿದ್ದಾನೆ. ಯಾರು ನಮಾಜ್ ಬಗ್ಗೆ ಕಾಳಜಿ ವಹಿಸುವುದಿಲ್ಲವೋ, ಯಾರು ಜಿಹಾದ್ನ ಧ್ವಜವನ್ನು ಎತ್ತಿ ಹಿಡಿಯುವುದಿಲ್ಲವೋ ಮತ್ತು ಹುತಾತ್ಮರ ರಕ್ತಕ್ಕೆ ಬೆಲೆ ಕೊಡುವುದಿಲ್ಲವೋ ಅಂತಹವರಿಗೆ ಪಾಕಿಸ್ತಾನವನ್ನು ಆಳುವ ನೈತಿಕ ಹಕ್ಕಿಲ್ಲ. ಈ ವಿಷಯವನ್ನು ತಾನು ಮುಜಫರಾಬಾದ್ನಲ್ಲಿ ನಡೆದ ಸಭೆಯಲ್ಲಿ ಪಾಕ್ ಪ್ರಧಾನಿಯ ಮುಖಕ್ಕೆ ಹೊಡೆದಂತೆ ಹೇಳಿದ್ದೆ ಎಂದು ಉಗ್ರ ಅಬು ಮೂಸಾ ದಾರ್ಷ್ಟ್ಯದ ಮಾತುಗಳನ್ನಾಡಿದ್ದಾನೆ.
ಪಹಲ್ಗಾಮ್ ದಾಳಿಯ ರೂವಾರಿ
ಕಾಶ್ಮೀರ ಯುನೈಟೆಡ್ ಮೂವ್ಮೆಂಟ್ ಹೆಸರಿನ ಸಂಘಟನೆಯ ಸದಸ್ಯನಾಗಿರುವ ಈತ, ಲಷ್ಕರ್-ಎ-ತೈಬಾದ ಪ್ರಮುಖ ಆಪರೇಷನಲ್ ಕಮಾಂಡರ್ ಆಗಿದ್ದಾನೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ರೂವಾರಿ ಈತನೇ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಅಬು ಮೂಸಾ ಮತ್ತು ಆತನ ಸಹಚರ ರಿಜ್ವಾನ್ ಹನೀಫ್, ಪಾಕ್ ಆಕ್ರಮಿತ ಕಾಶ್ಮೀರದ ಮುರಿಡ್ಕೆಯಲ್ಲಿ ಅಫಘಾನ್ ಮೂಲದ ಉಗ್ರಗಾಮಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಅವರನ್ನು ಕಾಶ್ಮೀರಕ್ಕೆ ಕಳುಹಿಸುವ ಜವಾಬ್ದಾರಿ ಹೊತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.
ಗಾಜಾ ಮಾದರಿಯ ದಾಳಿಯ ಎಚ್ಚರಿಕೆ
ತನ್ನ ಭಾಷಣದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ಉಲ್ಲೇಖಿಸಿರುವ ಮೂಸಾ, ಗಾಜಾ ಮತ್ತು ಕಾಶ್ಮೀರದ ಸಮಸ್ಯೆಗಳು ಒಂದೇ ಆಗಿದ್ದು, ಇವೆರಡಕ್ಕೂ ಒಂದೇ ಪರಿಹಾರ ಅದುವೇ ಜಿಹಾದ್ ಎಂದು ಹೇಳಿದ್ದಾನೆ. ಇಸ್ರೇಲ್ ದೇಶವನ್ನು ಮಂಡಿಯೂರಿದಂತೆಯೇ, ಕಾಶ್ಮೀರದಲ್ಲಿಯೂ ನಾವು ಅದೇ ಮಾದರಿಯನ್ನು ಅನುಸರಿಸಿ ಹಿಂದೂಗಳನ್ನು ಗುರಿಯಾಗಿಸುತ್ತೇವೆ. ನಮ್ಮ ಶತ್ರುಗಳು ಪ್ಯಾಲೆಸ್ಟೈನ್ ಮತ್ತು ಕಾಶ್ಮೀರ ಎರಡೂ ಕಡೆ ಒಂದೇ ಆಗಿದ್ದಾರೆ ಎಂದು ಹೇಳುವ ಮೂಲಕ, ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡ ನಡೆಸುವ ತನ್ನ ನೀಚ ಉದ್ದೇಶವನ್ನು ಬಹಿರಂಗಪಡಿಸಿದ್ದಾನೆ.
ತನ್ನ ಮಾತು, ಕೃತಿ ಮತ್ತು ಬರವಣಿಗೆಯ ಮೂಲಕ ಜಿಹಾದ್ ಅನ್ನು ಮುಂದುವರಿಸುವುದಾಗಿ ಮತ್ತು ರಕ್ತಸಿಕ್ತ ಮಾರ್ಗದ ಮೂಲಕವೇ ಅಲ್ಲಾಹನ ಬಳಿಗೆ ಮರಳುವುದಾಗಿ ಶಪಥ ಮಾಡಿರುವ ಅಬು ಮೂಸಾನ ಈ ಹೇಳಿಕೆಗಳು ಭದ್ರತಾ ಪಡೆಗಳಿಗೆ ಹೊಸ ಸವಾಲನ್ನು ಒಡ್ಡಿದೆ.








